ಚಿತ್ರದುರ್ಗ ಬಸ್‌ ದುರಂತ: ಪಿಎಂ, ಸಿಎಂ ಸಂತಾಪ

0
5

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಹೊತ್ತಿ ಉರಿದ ಪರಿಣಾಮ 10ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕ್ರಿಸ್ಮಸ್ ರಜೆಯ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ತೆರಳುತ್ತಿದ್ದ ಪ್ರಯಾಣಿಕರ ಪ್ರಯಾಣ ಈ ಭೀಕರ ದುರಂತದಲ್ಲಿ ಅಂತ್ಯ ಕಂಡಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೊತ್ತಿ ಉರಿದ ಬಸ್, 18 ಮಂದಿ ಸಜೀವ ದಹನ

ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ: ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿಯಾಗಿರುವುದು ಅತೀವ ದುಃಖ ತಂದಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ” ಎಂದು ಹೇಳಿದ್ದಾರೆ.

ಮೃತರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (PMNRF) ಯಿಂದ ತಲಾ ₹2 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ₹50,000 ರೂ. ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಎದೆ ನಡುಗುವ ದುರಂತ – ಸಿಎಂ ಸಿದ್ದರಾಮಯ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಚಿತ್ರದುರ್ಗ ಬಳಿ ಲಾರಿ ಮತ್ತು ಬಸ್ ನಡುವೆ ನಡೆದ ಅಪಘಾತದಲ್ಲಿ ಹಲವರು ಸಜೀವ ದಹನವಾದ ಘೋರ ದುರಂತದ ಸುದ್ದಿ ಎದೆ ನಡುಗಿಸಿದೆ. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ಕೊನೆಗೊಂಡಿರುವುದು ಅತ್ಯಂತ ವಿಷಾದನೀಯ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಂಕಣ ಬರಹ: ಸಾಮಾಜಿಕ ಬಹಿಷ್ಕಾರ… ಬಿತ್ತು ಕ್ರಾಂತಿಕಾರಕ ಪ್ರಹಾರ!

ಸಿಎಂ ಸಿದ್ದರಾಮಯ್ಯ ಸಂತಾಪ, ಪರಿಹಾರ ಘೋಷಣೆ: ಚಿತ್ರದುರ್ಗದಲ್ಲಿ‌ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ರೂ.50,000 ಪರಿಹಾರ ನೀಡಲಾಗುವುದು. ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸೂಚಿಸಿದ್ದೇನೆ. ಅಪಘಾತದ ಕುರಿತು ಸೂಕ್ತ ತನಿಖೆ ನಡೆಸಿ ನಿಖರ ಕಾರಣ ಪತ್ತೆಹಚ್ಚಲಾಗುವುದು ಎಂದು ತಿಳಿಸಿದ ಸಿಎಂ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಜೊತೆಗೆ, ಅಪಘಾತದಲ್ಲಿ ಮಡಿದ ಕುಟುಂಬಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಅಪಘಾತದ ಬಳಿಕ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿಯನ್ನು ನಿಯಂತ್ರಿಸಿ ಮೃತದೇಹಗಳು ಮತ್ತು ಗಾಯಾಳುಗಳನ್ನು ಹೊರತೆಗೆದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Previous articleಕ್ಯಾಥೆಡ್ರಲ್ ಚರ್ಚ್‌ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಪ್ರಧಾನಿ ಮೋದಿ ಭಾಗಿ