ಚಿತ್ರದುರ್ಗ: ಹಿರಿಯೂರು ತಾಲ್ಲೂಕು ಜವಗೊಂಡನಹಳ್ಳಿ ಗೊರ‍್ಲತ್ತು ಬಳಿ ಗುರುವಾರ ಸಂಭವಿಸಿದ ಭೀಕರ ಅಪಘಾತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆ ಆಗಿದೆ.
ತಲೆಗೆ ತೀವ್ರ ಪೆಟ್ಟಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಸೀಬರ್ಡ್ ಬಸ್ ಚಾಲಕ ಮಹಮ್ಮದ್ ರಫೀಕ್ (38) ಶುಕ್ರವಾರ ಮುಂಜಾನೆ 5 ಗಂಟೆಗೆ ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಹುಲಗೂರು ಮೂಲದ ರಫೀಕ್ ಬಸ್ ಚಾಲಕರಾಗಿ ಬದುಕು ಕಟ್ಟಿಕೊಂಡಿದ್ದರು.
ಡಿಎನ್‌ಎ ಟೆಸ್ಟ್: ಗುರುವಾರ ಸಂಜೆ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಆರಂಭಗೊಂಡಿದ್ದು, ಕೋರ್ಟ್ ಅನುಮತಿ ಪಡೆದು ಮೃತದೇಹಗಳ ಮೂಳೆ ಸ್ಯಾಂಪಲ್‌ನ್ನು ಡಾ. ವೇಣು, ಡಾ. ಅಜಯ್ ತಂಡ ಪಡೆದು, ಡಿಎನ್‌ಎ ಪರೀಕ್ಷೆಗಾಗಿ ಹುಬ್ಬಳ್ಳಿ ಕೇಂದ್ರಕ್ಕೆ ರವಾನೆ ಮಾಡಿದ್ದಾರೆ.
ಒಂದೆರಡು ದಿನಗಳಲ್ಲಿ ಡಿಎನ್‌ಎ ವರದಿ ಪಡೆಯಲು ಪ್ರಯತ್ನ ನಡೆಸುತ್ತಿದ್ದು, ವರದಿ ಕೈಸೇರುತ್ತಿದ್ದಂತೆ ಮೃತದೇಹಗಳನ್ನು ಕುಟುಂಬದವರಿಗೆ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ತಿಳಿಸಿದ್ದಾರೆ.




















