ಬಿಜೆಪಿ ಸಂಸದರು ರಬ್ಬರ್ ಸ್ಟಾಂಪ್, ನಿಷ್ಪ್ರಯೋಜಕರು

0
1

ಚಿತ್ರದುರ್ಗ: ರಾಜ್ಯದಲ್ಲಿನ ಬಿಜೆಪಿ ಸಂಸದರು ರಬ್ಬರ್ ಸ್ಟಾಂಪ್ ಇದ್ದಂತಿದ್ದಾರೆ. ಮೋದಿ, ಅಮಿತ್ ಶಾ ಎದುರು ನಿಂತುಕೊಳ್ಳುವ ಶಕ್ತಿಯೇ ಅವರಿಗಿಲ್ಲ. ಇನ್ನು ಅವರೆದೆರು ಮಾತನಾಡುವುದು ಎಲ್ಲಿಂದ ಬಂತು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದರು.

ಚಿತ್ರದುರ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿರುವ 5,300 ಕೋಟಿ ರೂ. ಹಣ ಬಿಡುಗಡೆ ಮಾಡಿಸಲು ರಾಜ್ಯ ಬಿಜೆಪಿ ನಾಯಕರಿಗೆ ಶಕ್ತಿಯೇ ಇಲ್ಲ ಎಂದು ದೂರಿದರು.

ಕೇಂದ್ರದಲ್ಲಿ ಸಚಿವರಾಗಿರುವ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಎಲ್ಲರೂ ರಬ್ಬರ್ ಸ್ಟಾಂಪ್‌ಗಳೇ. ಕಾರಣ ಮೋದಿ, ಶಾ ಸರ್ವಾಧಿಕಾರಿಗಳಾಗಿದ್ದಾರೆ. ಅವರೊಂದಿಗೆ ಚರ್ಚೆ, ಜಗಳ ಮಾಡಿ ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಲು ಹಾಗೂ ತಾರತಮ್ಯ ಧೋರಣೆ ಖಂಡಿಸಲು ಇವರಿಂದ ಸಾಧ್ಯವೇ ಇಲ್ಲ. ಇವರೆಲ್ಲರೂ ನಿಷ್ಪ್ರಯೋಜಕರು ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟು ಇದೆ. ಮಲ್ಲಿಕಾರ್ಜುನ್ ಖರ್ಗೆ ಹೇಳಿದಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ಆದರೂ ಮುಖ್ಯಮಂತ್ರಿ ವಿಷಯದಲ್ಲಿ ಅನಗತ್ಯ ಚರ್ಚೆ ಆಗುತ್ತಿರುವುದು ಬೇಸರದ ಸಂಗತಿ. ಡಿನ್ನರ್ ಪಾರ್ಟಿಗೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ. ನಾನು ಕೂಡ ಬೆಳಗಾವಿಯಲ್ಲಿ ಆಯೋಜಿಸಿದ್ದ ಔತಣಕೂಟಕ್ಕೆ ಹೋಗಿದ್ದೆ, 60 ಮಂದಿ ಶಾಸಕರು ಬಂದಿದ್ದರು. ಆದರೆ, ಅದು ಸುದ್ದಿ ಆಗಲಿಲ್ಲ ಎಂದು ಹೇಳಿದರು.

ಬೆಳಗಾವಿ ಡಿಸಿಗೆ ಮಹಾರಾಷ್ಟ್ರದಿಂದ ಬೆದರಿಕೆ ವಿಚಾರ ಅದೊಂದು ರಾಜಕಾರಣ. ಬೆಳಗಾವಿ ಜಿಲ್ಲೆ ಎಂದಿಗೂ ನಮ್ಮದೆ. ಮಂಗಳೂರಲ್ಲಿ ವೈದ್ಯಾಧಿಕಾರಿಗಳು ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರೂ ರಾಜೀನಾಮೆ ಕೊಟ್ಟಿಲ್ಲ. ಈ ಬಗ್ಗೆ ಪರಿಶೀಲಿಸುತ್ತೇನೆ ಎಂದರು.

Previous articleಕೋಳಿ ಅಂಕಕ್ಕೆ ತಡೆ ಯತ್ನ: ರಾಜ್ಯ ಸರಕಾರದ ತುಘಲಕ್ ಶಾಹಿ ಆಡಳಿತ