ಚಿಕ್ಕಮಗಳೂರು: ದೆಹಲಿಯಲ್ಲಿ ನಡೆಯಲಿರುವ 2026ರ ಗಣರಾಜ್ಯೋತ್ಸವ ಸಮಾರಂಭಕ್ಕೆ ಮಲೆನಾಡಿನ ಯುವ ವಿಜ್ಞಾನಿ ತಾಲೂಕಿನ ಆಲ್ದೂರು ಗ್ರಾಮದ ಅವೈಜ್ ಅಹಮದ್‌ಗೆ ರಾಷ್ಟ್ರಪತಿಗಳಿಂದ ಆಹ್ವಾನ ದೊರೆತಿದೆ. ರಾಷ್ಟ್ರಪತಿಗಳು ಅವರಿಗೆ ಆಹ್ವಾನ ನೀಡಿರುವ ಕುರಿತು ಭಾರತೀಯ ಅಂಚೆ ಇಲಾಖೆಯೂ ವಿಡಿಯೋ ಬಿಡುಗಡೆ ಮಾಡಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ಇವರ ಪ್ರತಿಭೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ದೇಶದ ಅತ್ಯುನ್ನತ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದ ಅವೈಜ್ ಅವರಿಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಇವರು ಸ್ಥಾಪಿಸಿರುವ ‘ಪಿಕ್ಸೆಲ್’ ಬಾಹ್ಯಾಕಾಶ ಸಂಸ್ಥೆಯು ಈಗಾಗಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದು, ಈ ಹಿಂದೆ ‘ಶಕುಂತಲಾ’ ಮತ್ತು ‘ಆನಂದ್’ ಎಂಬ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಜಾಗತಿಕ ಗಮನ ಸೆಳೆದಿದ್ದರು.
ಇದನ್ನೂ ಓದಿ: ಶಿರೂರು ಪರ್ಯಾಯ – ಕೃಷ್ಣ ನಗರಿಯಲ್ಲಿ ಹಬ್ಬದ ಸಂಭ್ರಮ
ಇತ್ತೀಚೆಗಷ್ಟೇ ಪಿಕ್ಸೆಲ್ ಸಂಸ್ಥೆಯು ‘ಫೈರ್‌ಫ್ಟ್’ ಶ್ರೇಣಿಯ ಅತ್ಯಾಧುನಿಕ ಹೈಪರ್‌ಸ್ಪೆಕ್ಟಲ್ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಇವು ಭೂಮಿಯ ಮೇಲಿರುವ ಅದೃಶ್ಯ ಮಾಲಿನ್ಯಕಾರಕಗಳು ಹಾಗೂ ಬೆಳೆಗಳ ಆರೋಗ್ಯವನ್ನು ಅತ್ಯಂತ ನಿಖರವಾಗಿ ಗುರುತಿಸುವ ಸಾಮರ್ಥ್ಯ ಹೊಂದಿವೆ. ಗೂಗಲ್‌ನಂತಹ ಜಾಗತಿಕ ಸಂಸ್ಥೆಗಳ ಬೆಂಬಲದೊಂದಿಗೆ ಬೆಳೆಯುತ್ತಿರುವ ಇವರ ಸಂಸ್ಥೆಯು ಈವರೆಗೆ ಹಲವು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಯಶಸ್ವಿಯಾಗಿದೆ.
ಕಾಫಿನಾಡಿನ ಪುಟ್ಟ ಗ್ರಾಮದಿಂದ ಹೊರಹೊಮ್ಮಿದ ಈ ಯುವ ವಿಜ್ಞಾನಿಯ ಸಾಧನೆಯು ಮುಂಬರುವ ಯುವ ಪೀಳಿಗೆಗೆ ದೊಡ್ಡ ಪ್ರೇರಣೆಯಾಗಿದ್ದು, ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಅತಿಥಿಯಾಗಿ ಭಾಗವಹಿಸುತ್ತಿರುವುದು ಅವರ ಶ್ರಮಕ್ಕೆ ಸಂದ ಗೌರವ ಇದಾಗಿದೆ.























