ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಾಣಿಕ್ಯಧಾರ ಜಲಪಾತ ಬಳಿ ಕೇರಳ ರಾಜ್ಯದ ಪಾಲಕ್ಕಾಡ್ ಮೂಲದ ಹತ್ತನೇ ತರಗತಿ ವಿದ್ಯಾರ್ಥಿನಿ ನಂದನಾ ನಾಪತ್ತೆಯಾಗಿರುವ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ.
ಸುಮಾರು 40 ಮಂದಿ ಪ್ರವಾಸಿಗರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ, ಕುಟುಂಬ ಸದಸ್ಯರ ಕಣ್ಣೆದುರೇ ನಿಗೂಢವಾಗಿ ಕಾಣೆಯಾಗಿರುವುದು ಪ್ರಕರಣಕ್ಕೆ ಗಂಭೀರತೆ ತಂದಿದೆ. ಘಟನೆ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು.
ಮಂಗಳವಾರ ರಾತ್ರಿ ತಡರಾತ್ರಿ 1 ಗಂಟೆಯವರೆಗೆ 30ಕ್ಕೂ ಹೆಚ್ಚು ಸಿಬ್ಬಂದಿ ಬೆಟ್ಟದ ದುರ್ಗಮ ಪ್ರದೇಶಗಳಲ್ಲಿ ಶೋಧ ನಡೆಸಿದರೂ, ದಟ್ಟ ಮಂಜು ಮತ್ತು ಕತ್ತಲೆ ಕಾರ್ಯಾಚರಣೆಗೆ ಅಡ್ಡಿಯಾಯಿತು. ಯಾವುದೇ ಸುಳಿವು ಸಿಗದ ಹಿನ್ನೆಲೆ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಬುಧವಾರ ಬೆಳಗ್ಗಿನಿಂದಲೇ ಶೋಧ ಕಾರ್ಯ ಮತ್ತೆ ಬಿರುಸುಗೊಂಡಿದ್ದು, ಈ ಬಾರಿ ಆಧುನಿಕ ಡ್ರೋನ್ ಕ್ಯಾಮೆರಾಗಳ ಸಹಾಯದಿಂದ ಕಾಡಿನ ಒಳಭಾಗಗಳಲ್ಲೂ ಪರಿಶೀಲನೆ ನಡೆಯುತ್ತಿದೆ. ಪಶ್ಚಿಮ ಘಟ್ಟದ ದುರ್ಗಮ ಪರ್ವತ ಪ್ರದೇಶ, ದಟ್ಟ ಅರಣ್ಯ ಮತ್ತು ಅಪಾಯಕಾರಿ ಹಾದಿಗಳ ನಡುವೆಯೂ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯಾಚರಣೆ ಮುಂದುವರೆಸುತ್ತಿದ್ದಾರೆ.
ಈ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಾಲಕಿಯ ಕುಟುಂಬಸ್ಥರು ಭಾರೀ ಆತಂಕದಲ್ಲಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಎಲ್ಲ ಸಾಧ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಈಗಾಗಲೇ ಡ್ರೋನ್ ಕ್ಯಾಮೆರಾ ಮತ್ತು ತಂತ್ರಜ್ಞಾನ ಬಳಸಿ ಶೋಧ ಕಾರ್ಯ ವೇಗಗೊಳಿಸಲಾಗಿದ್ದು ಪರ್ವತ ಪ್ರದೇಶಗಳಲ್ಲಿ ವಿಶೇಷ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಸ್ಥಳೀಯರು ಮತ್ತು ಮಾರ್ಗದರ್ಶಕರ ಸಹಾಯದಿಂದ ಕಾಡಿನ ಒಳಭಾಗದಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ.





















