ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜ್ಯದ ಜನರನ್ನು ತೀವ್ರವಾಗಿ ದುಃಖಕ್ಕೆ ತಳ್ಳಿದೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.
ಗುರುವಾರ ತಡರಾತ್ರಿ ಅಜ್ಜವಾರ ಗೇಟ್ ಬಳಿ ಟಿಪ್ಪರ್ ಲಾರಿ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರ ಮೇಲೆ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಬಸ್ ಅಪಘಾತ ಪ್ರಕರಣ : ಬದುಕುಳಿಯದ ಬಸ್ ಚಾಲಕ
ಮೃತರನ್ನು ಅಜ್ಜವಾರ ಗ್ರಾಮದ ನಿವಾಸಿಗಳಾದ ಮನೋಜ್, ನರಸಿಂಹಮೂರ್ತಿ, ನಂದೀಶ್ ಮತ್ತು ಅರುಣ್ ಎಂದು ಗುರುತಿಸಲಾಗಿದೆ. ನಾಲ್ವರೂ ಸ್ನೇಹಿತರಾಗಿದ್ದು, ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಈ ಭೀಕರ ಅಪಘಾತದ ವಿಷಯವನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದರು. ಮೃತರ ಕುಟುಂಬಗಳಿಗೆ ತಕ್ಷಣ ನೆರವು ನೀಡುವಂತೆ ಅವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಿಎಂ ಪರಿಹಾರ ಘೋಷಣೆ ಮಾಡಿದ್ದಾರೆ. ಪರಿಹಾರ ವಿತರಣೆಗೆ ಯಾವುದೇ ವಿಳಂಬವಾಗದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.
ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆ: ಮೃತರ ಪೈಕಿ ನರಸಿಂಹಮೂರ್ತಿ ಅವರ ವಿವಾಹ ಕೆಲ ತಿಂಗಳ ಹಿಂದಷ್ಟೇ ನಡೆದಿದ್ದು, ಪ್ರೀತಿಸಿ ಮದುವೆಯಾಗಿದ್ದ ಯುವತಿ ಮದುವೆಯಾದ ಆರು ತಿಂಗಳೊಳಗೇ ವಿಧಿಯಾಟಕ್ಕೆ ಗಂಡನನ್ನು ಕಳೆದುಕೊಂಡಿರುವುದು ಕುಟುಂಬದ ಆಕ್ರಂದನವನ್ನು ಇನ್ನಷ್ಟು ಹೆಚ್ಚಿಸಿದೆ. ಮನೆಗೆ ಆಧಾರವಾಗಿದ್ದ ಯುವಕರ ಅಕಾಲಿಕ ಮರಣದಿಂದ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.
ಇದನ್ನೂ ಓದಿ: ಮೈಸೂರು ಅರಮನೆ ಮುಂಭಾಗ ಗ್ಯಾಸ್ ಸಿಲಿಂಡರ್ ಸ್ಫೋಟ: ಓರ್ವ ಸಾವು, ಹಲವರಿಗೆ ಗಂಭೀರ ಗಾಯ
ಘಟನೆ ನಡೆದ ಅಜ್ಜವಾರ ರಸ್ತೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಶೋಕದ ವಾತಾವರಣ ಆವರಿಸಿದ್ದು, ಗ್ರಾಮಸ್ಥರು ದುಃಖದಲ್ಲಿ ಮುಳುಗಿದ್ದಾರೆ. ಕ್ರಿಸ್ಮಸ್ ಸಂಭ್ರಮದ ಹೊತ್ತಿನಲ್ಲಿ ಈ ರೀತಿಯ ದುರ್ಘಟನೆ ಸಂಭವಿಸಿರುವುದು ಎಲ್ಲರ ಮನಕಲಕುವಂತಾಗಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂತಾಪ ಸೂಚಿಸಿದ್ದಾರೆ “ಚಿಕ್ಕಬಳ್ಳಾಪುರ ನಗರದ ಹೊರವಲಯದ ಅಜ್ಜವಾರ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಯುವಕರು ಸಾವಿಗೀಡಾದ ಸುದ್ದಿ ತಿಳಿದು ಅತೀವ ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬದ ಆಧಾರವಾಗಿದ್ದ ಯುವಕರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುತ್ತಿದೆ. ತಮ್ಮವರನ್ನು ಕಳೆದುಕೊಂಡ ನೋವನ್ನು ಭರಿಸುವ ಶಕ್ತಿ ಆ ಕುಟುಂಬಗಳಿಗೆ ಸಿಗಲಿ” ಎಂದು ತಿಳಿಸಿದ್ದಾರೆ.









