ಚಿಕ್ಕಬಳ್ಳಾಪುರ: 25 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಶವವಾಗಿ ವಾಪಸ್

0
18

ಜಂಗಮಕೋಟೆ(ಚಿಕ್ಕಬಳ್ಳಾಪುರ): ಸಿದ್ಧಗಂಗಾಮಠದಲ್ಲಿ ವ್ಯಾಸಂಗಕ್ಕಾಗಿ 5ನೇ ತರಗತಿಗೆ ದಾಖಲಾಗಿದ್ದ ಭಕ್ತರಹಳ್ಳಿಯ ಗಂಗಾಧರ್ ಎಂಬ ವಿದ್ಯಾರ್ಥಿ ನಂತರ ನಾಪತ್ತೆಯಾಗಿ, 25 ವರ್ಷಗಳ ನಂತರ ಶವವಾಗಿ ತನ್ನ ಹುಟ್ಟೂರಿಗೆ ರವಾನೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದು, ನಂತರ ವಾರಸುದಾರರನ್ನು ಪತ್ತೆ ಹಚ್ಚಿರುವ ಎಚ್‌ಎಸ್‌ಆರ್ ಲೇಔಟ್‌ನ ಪೊಲೀಸರು ಮೃತ ದೇಹವನ್ನು ಅವರಿಗೆ ಹಸ್ತಾಂತರಿಸಿದ್ದಾರೆ.

ಭಕ್ತರಹಳ್ಳಿಯ ಪರಂದಾಮಯ್ಯ ಎಂಬುವರ ಮಗ ಗಂಗಾಧರ್‌ನನ್ನು 25 ವರ್ಷಗಳ ಹಿಂದೆ ಸಿದ್ದಗಂಗಾಮಠದಲ್ಲಿ ವಿದ್ಯಾಭ್ಯಾಸಕ್ಕಾಗಿ 5ನೇ ತರಗತಿಗೆ ದಾಖಲಿಸಿದ್ದರು. ಆದರೆ 2 ತಿಂಗಳಲ್ಲಿ ನಾಪತ್ತೆಯಾಗಿದ್ದ. ಈ ಕುರಿತು ಪೋಷಕರು, ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿ, ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.

ಅಂದು ಕಾಣೆಯಾಗಿದ್ದ ವಿದ್ಯಾರ್ಥಿ ಆರ್‌ಸಿಬಿ ಕ್ರಿಕೆಟ್ ಸಂಭ್ರಮಾಚರಣೆಗೆ ಬಂದು, ನಂತರ ದ್ವಿಚಕ್ರ ವಾಹನದಲ್ಲಿ ತನ್ನ ಸ್ನೇಹಿತರೊಂದಿಗೆ ಹೋಗುತ್ತಿದ್ದ ವೇಳೆ ಅಪಘಾತಕ್ಕೆ ಒಳಗಾಗಿ ಗಾಯಗೊಂಡು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಇದೇ 25ರಂದು ಮೃತಪಟ್ಟ. ನಂತರ ಈ ಯುವಕನ ವಿಳಾಸ ಪತ್ತೆ ಹಚ್ಚಿದ ಪೊಲೀಸರು, ಭಕ್ತರಹಳ್ಳಿಯ ಪಿಡಿಒ ಅವರಿಗೆ ಮಾಹಿತಿ ರವಾನೆ ಮಾಡಿದರು. ನಂತರ 30ರಂದು ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಿದ್ದಾರೆ. ಗ್ರಾಮದಲ್ಲಿ ಮೃತನ ಅಂತ್ಯಕ್ರಿಯೆ 31ರ ಭಾನುವಾರ ನಡೆದಿದೆ.

Previous articleಟ್ರಂಪ್ ಮಣಿಸಲು ಭಾರತ-ಚೀನಾ ಒಗ್ಗಟ್ಟು
Next articleಮಹಿಳಾ ಏಕದಿನ ವಿಶ್ವಕಪ್ 2025: ದಾಖಲೆ ಮಟ್ಟದ ಬಹುಮಾನ ಘೋಷಿಸಿದ ಐಸಿಸಿ

LEAVE A REPLY

Please enter your comment!
Please enter your name here