ಸಂ.ಕ.ಸಮಾಚಾರ ಚಾಮರಾಜನಗರ: ಆಭರಣ ತಯಾರಕನ ಕಾರು ಅಡ್ಡಗಟ್ಟಿ ಸುಮಾರು 1.3 ಕೆಜಿ ಚಿನ್ನಾಭರಣವನ್ನು ದುಷ್ಕರ್ಮಿಗಳು ದರೋಡೆ ಮಾಡಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೂಲೆಹೊಳೆ ಚೆಕ್‌ಪೋಸ್ಟ್ ಸಮೀಪ ಎರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೇರಳದ ಕ್ಯಾಲಿಕಟ್ ನಿವಾಸಿಯೂ ಆದ ಆಭರಣ ತಯಾರಕ ವಿನು (49) ಕೋಟ್ಯಾಂತರ ರೂಪಾಯಿ ಚಿನ್ನಾಭರಣ ಕಳೆದುಕೊಂಡವರು. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಡ್ಯದ ರಾಜೇಶ್ ಜ್ಯುವೆಲರ್ಸ್ ಎಂಬುವರಿಂದ ಆಭರಣ ತಯಾರಿಕೆಗಾಗಿ 800 ಗ್ರಾಂ 24 ಕ್ಯಾರೆಟ್ ಚಿನ್ನದ ಗಟ್ಟಿ ಹಾಗೂ 518 ಗ್ರಾಂ 22 ಕ್ಯಾರೆಟ್ ಚಿನ್ನವನ್ನು ಬಂಡೀಪುರದ ಮೂಲೆಹೊಳೆ ಮೂಲಕ ತರುತ್ತಿದ್ದಾಗ ಎರಡು ಇನ್ನೋವಾ ಹಾಗೂ ಒಂದು ಇಟಿಯೋಸ್ ವಾಹನದಲ್ಲಿ ಬಂದ ದರೋಡೆಕೋರರು ಕಾರನ್ನು ಅಡ್ಡಗಟ್ಟಿ ಕಾರು ಸಮೇತ ಅಪಹರಿಸಿದ್ದಾರೆ.
ಸ್ಥಳಕ್ಕೆ ಎಸ್‌ಪಿ ಭೇಟಿ: ದೂರು ದಾಖಲಾಗುತ್ತಿದ್ದಂತೆ ಘಟನೆ ನಡೆದ ಮೂಲೆಹೊಳೆ ಚೆಕ್ ಪೋಸ್ಟ್‌ಗೆ ಚಾಮರಾಜನಗರ ಎಸ್‌ಪಿ ಡಾ.ಬಿ.ಟಿ. ಕವಿತಾ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಮಾತನಾಡಿ, ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಚಿನ್ನ ಪಡೆಯುವ ಹಾಗೂ ಚಿನ್ನ ಸಾಗಾಟದ ಎಲ್ಲಾ ಮಾರ್ಗದ ಮಾಹಿತಿಯನ್ನು ದರೋಡೆಕೋರರು ಪಡೆದು ಕೃತ್ಯ ಎಸಗಿದ್ದಾರೆ. ಈ ಹಿಂದಿನ ದರೋಡೆ ಪ್ರಕರಣ ಗಮನಿಸಿದರೇ ಕೇರಳದ ದರೋಡೆ ಗ್ಯಾಂಗ್ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.


























