ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶ್ರೀಮಲೆ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ಭಾನುವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪತ್ನಿ ಉಷಾ ಹಾಗೂ ಮಗಳು ಐಶ್ವರ್ಯ ಭೇಟಿ ನೀಡಿ ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರ ಪತ್ನಿ ಮತ್ತು ಮಗಳು ಮಹದೇಶ್ವರರ ದರ್ಶನ ಪಡೆದು, ಬಳಿಕ ಸಾಲೂರು ಮಠದಲ್ಲಿ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಇದೇ ವೇಳೆ ದೇವಸ್ಥಾನದ ಕಚೇರಿಯಲ್ಲಿ ಡಿಕೆಶಿ ಪತ್ನಿ ಉಷಾ ಅವರಿಗೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು, ದೇವಸ್ಥಾನದ ಪಾರಿಪತ್ತೇಗಾರ ಮಹದೇವಸ್ವಾಮಿ ಸೇರಿದಂತೆ ಇತರರು ಗೌರವ ಸಲ್ಲಿಸಿದರು. ಬಳಿಕ ಮಠ ಹಾಗೂ ದೇವಸ್ಥಾನದ ಆವರಣದಲ್ಲಿ ಸ್ವಲ್ಪ ಸಮಯ ಕಾಲ ಕಳೆದು ನಂತರ ಬೆಂಗಳೂರಿಗೆ ತೆರಳಿದರು.
ಇದನ್ನೂ ಓದಿ: ಶಿವರಾತ್ರಿಯಂದೇ ಶಿವನ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳು
ಪತಿಗೆ ಸಿಎಂ ಸ್ಥಾನಕ್ಕಾಗಿ ಕೋರಿಕೆ: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶೀಘ್ರವೇ ಮುಖ್ಯಮಂತ್ರಿ ಸ್ಥಾನ ಲಭಿಸಲಿ, ಕುಟುಂಬಕ್ಕೆ ಒಳಿತಾಗಲೆಂದು ಡಿಕೆಶಿ ಪತ್ನಿ ಉಷಾ ಹಾಗೂ ಮಗಳು ಐಶ್ವರ್ಯ ಮಾದಪ್ಪನಿಗೆ ಶಿವರಾತ್ರಿಯ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.























