ಬೀದರ್ ಜಿಲ್ಲೆಯ ರೈತರಿಗೆ ಇದೊಂದು ಸಮಾಧಾನಕರ ಸುದ್ದಿ. ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಬೆಳೆ ಹಾನಿಗೆ ರಾಜ್ಯ ಸರ್ಕಾರ ಘೋಷಿಸಿದ್ದ 300 ಕೋಟಿ ರೂ. ಪರಿಹಾರ ಧನವನ್ನು ಅಕ್ಟೋಬರ್ 30 ರೊಳಗೆ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಹೆಚ್ಚುವರಿ 8,500 ರೂ. ಪರಿಹಾರವೂ ಇದರಲ್ಲಿ ಸೇರಿದೆ.
ಬೀದರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಮಾತನಾಡಿದ ಸಚಿವರು, ಮಳೆ ಹಾನಿ ಪ್ರದೇಶದ ತಹಶೀಲ್ದಾರರು ನಾಳೆ ಸಂಜೆಯೊಳಗೆ ಪರಿಹಾರದ ಪೋರ್ಟಲ್‌ನಲ್ಲಿ ಹಾನಿಯ ಪ್ರಮಾಣವನ್ನು ಕಡ್ಡಾಯವಾಗಿ ದಾಖಲಿಸಿ, ಪರಿಹಾರ ವಿತರಣೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ನಿಯಮದ ಪ್ರಕಾರ ಈಗಾಗಲೇ 170 ಕೋಟಿ ರೂ. ಪರಿಹಾರವನ್ನು ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.
ದೀಪಾವಳಿಯೊಳಗೆ ಎಲ್ಲಾ ಹಾನಿಗಳಿಗೆ ಪರಿಹಾರ: ಅಕಾಲಿಕ ಮಳೆಯಿಂದ ಉಂಟಾದ ಜೀವಹಾನಿ, ಬೆಳೆಹಾನಿ, ಮನೆ ಹಾನಿ ಮತ್ತು ಜಾನುವಾರು ಹಾನಿಗಳಿಗೆ ದೀಪಾವಳಿಯೊಳಗೆ ಪರಿಹಾರ ನೀಡುವುದಾಗಿ ಸರ್ಕಾರ ಪ್ರಕಟಿಸಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮಾನವೀಯತೆಯ ಆಧಾರದ ಮೇಲೆ ಹಗಲಿರುಳು ಶ್ರಮಿಸಿ, ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ಸಚಿವರು ಆದೇಶಿಸಿದರು.
ಬಸವಕಲ್ಯಾಣ, ಭಾಲ್ಕಿ ಮತ್ತು ಬೀದರ್ ತಾಲೂಕುಗಳಲ್ಲಿ ಮನೆ ಹಾನಿ ಪರಿಹಾರ ವಿತರಣೆಯಲ್ಲಿ ವಿಳಂಬವಾಗಿರುವ ಬಗ್ಗೆ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಇಂದೇ ಅಥವಾ ನಾಳೆ ಸಂಜೆಯೊಳಗೆ ಮನೆ ಹಾನಿ ಪರಿಹಾರ ಸಂತ್ರಸ್ತರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು. ವಿಳಂಬ ಅಥವಾ ಕರ್ತವ್ಯಲೋಪ ಎಸಗಿರುವ ಅಧಿಕಾರಿ, ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆಯೂ ಆದೇಶಿಸಿದರು.
ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ: ಪರಿಹಾರ ಪೋರ್ಟಲ್‌ನಲ್ಲಿ ದಾಖಲಿಸುವ ಪ್ರತಿಯೊಂದು ಮಾಹಿತಿಯನ್ನೂ ಗ್ರಾಮ ಪಂಚಾಯತಿ, ತಹಶೀಲ್ದಾರ್ ಕಚೇರಿ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಬಹಿರಂಗವಾಗಿ ಪ್ರಕಟಿಸಿ, ಡಂಗುರ ಹೊಡೆಸಿ, ಆಕ್ಷೇಪಣೆ ಆಹ್ವಾನಿಸುವಂತೆ ಸಚಿವರು ತಿಳಿಸಿದರು. ಇದರಿಂದ ಯಾವುದೇ ಸಂತ್ರಸ್ತರ ಮಾಹಿತಿ ಬಿಟ್ಟುಹೋಗಿದ್ದರೆ, ಅವರ ಹೆಸರನ್ನು ಸೇರಿಸಲು ಸಹಕಾರಿಯಾಗುತ್ತದೆ ಎಂದರು.
ಬೆಳೆ ವಿಮೆಯ ಸದ್ಬಳಕೆ: ಬೆಳೆ ವಿಮೆಯಡಿ ಬೆಳೆ ಋತುವಿನ ಮಧ್ಯದಲ್ಲಿ ವಿಕೋಪ ಉಂಟಾದರೆ ಪರಿಹಾರದ ಅವಕಾಶ ಕಲ್ಪಿಸಿದರೆ ರೈತರಿಗೆ ಸೂಕ್ತ ಪರಿಹಾರ ಸಿಗುತ್ತದೆ. ಇನ್ವೋಕ್ ಆಗದಿದ್ದರೆ ರೈತರಿಗೆ ಅನ್ಯಾಯವಾಗುತ್ತದೆ. ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯುತ್ ಸುರಕ್ಷತೆಗೆ ಆದ್ಯತೆ: ಕಡಿದು ನೆಲದ ಮೇಲೆ ಬಿದ್ದಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಬಗ್ಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಪ್ರಸ್ತಾಪಿಸಿದಾಗ, ಆಘಾತ ವ್ಯಕ್ತಪಡಿಸಿದ ಸಚಿವರು, ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಚಿಸಿ, ವಿದ್ಯುತ್ ತಂತಿಗಳು ಕತ್ತರಿಸಿ ಬೀಳದಂತೆ ಕವರ್ ಕಂಡಕ್ಟರ್‌ಗಳನ್ನು ಅಳವಡಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ಮಳೆಯಿಂದ ಎಷ್ಟು ಜೀವಹಾನಿ, ಬೆಳೆಹಾನಿ, ಮನೆ ಹಾನಿ, ರಸ್ತೆಗಳಿಗೆ ಹಾನಿ ಆಗಿದೆ ಮತ್ತು ಕೈಗೊಂಡಿರುವ ಕ್ರಮಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ತತ್‌ಕ್ಷಣವೇ ಆಯಾ ಕ್ಷೇತ್ರ ವ್ಯಾಪ್ತಿಯ ಶಾಸಕರಿಗೆ ನೀಡುವಂತೆ ಎಲ್ಲಾ ತಹಶೀಲ್ದಾರರುಗಳಿಗೆ ಸಚಿವರು ಸೂಚನೆ ನೀಡಿದರು.