ನಾನು ಜನರಿಂದ ಕಲಿತಿದ್ದೇ ಹೆಚ್ಚು: ಸಿಎಸ್ ಶಾಲಿನಿ
ಬೆಂಗಳೂರು: ಜೀವನದಲ್ಲಿ ಆಕಾಂಕ್ಷೆ ಇಟ್ಟುಕೊಳ್ಳಬೇಕು, ಆದರೆ ಮೌಲ್ಯಗಳನ್ನು ಮರೆಮಾಚಬಾರದು ಎಂಬುದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಮನದಾಳದ ಮಾತು.
ಮಹಿಳಾ ದಿನದ ಅಂಗವಾಗಿ ಸಂಯುಕ್ತ ಕರ್ನಾಟಕದ ಅತಿಥಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಅವರು, ಪತ್ರಿಕೆಯ ಸಿಬ್ಬಂದಿ ಜೊತೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿ, ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಯಾವುದೇ ಅಧಿಕಾರಿಗಳು ನೈತಿಕ ಮೌಲ್ಯಗಳನ್ನು ಮರೆಯದೆ, ಕಚೇರಿಗೆ ಬರುವ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಜನಪರವಾದ ಆಡಳಿತವನ್ನು ಅಧಿಕಾರಿಗಳು ನಡೆಸಬೇಕು. ಅಂದಾಗ ಮಾತ್ರ ಸಾರ್ಥಕ್ಯ ಎಂದರು.
ನನ್ನ 37 ವರ್ಷಗಳ ಅಧಿಕಾರ ಅವಧಿಯಲ್ಲಿ ಅಕಾಡೆಮಿಯಲ್ಲಿ ಕಲಿತ ಪಾಠಕ್ಕಿಂತ, ಜನರಿಂದ ಕಲಿತಿದ್ದು ಹೆಚ್ಚು. ಪ್ರತಿನಿತ್ಯ ಕಚೇರಿ ಬಳಿ ನೂರಾರು ಮಂದಿ ತಮ್ಮ ಸಮಸ್ಯೆಗಳನ್ನು ಹೊತ್ತು ಬರುತ್ತಾರೆ. ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಜನರ ದೀರ್ಘಾವಧಿಯ ಸಮಸ್ಯೆಗಳಿದ್ದಲ್ಲಿ, ಅವುಗಳಿಗೆ ಶಾಶ್ವತ ಪರಿಹಾರ ನೀಡುವತ್ತ ಅಧಿಕಾರಿಗಳು ಗಮನಹರಿಸಬೇಕು ಎಂದರು. ಈ ಹಿಂದೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನನ್ನ ಪತಿ ರಜನೀಶ್ ಗೋಯಲ್ ಸೇವೆ ಸಲ್ಲಿಸಿದ್ದಾರೆ. 2023ರಿಂದ ಸಿಎಸ್ ಆಗಿ ನಾನು ಕೂಡಾ ಸೇವೆ ಸಲ್ಲಿಸುತ್ತಿರುವುದು ತುಂಬಾ ಸಂತೋಷ ತಂದಿದೆ. ಕರ್ನಾಟಕವು ಜನಸಮಾನ್ಯರಿಗೆ ಆಡಳಿತ ಸೇವೆ ನೀಡುವುದರಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಬೇರೆ ಬೇರೆ ರಾಜ್ಯದಲ್ಲಿ ಸೇವೆ ಹಿರಿತನವನ್ನು ಪರಿಗಣಿಸದೆ ಸರ್ಕಾರದ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗುತ್ತದೆ. ಆದರೆ, ನಮ್ಮ ರಾಜ್ಯದಲ್ಲಿ ಮೊದಲಿನಿಂದಲೂ ಸೇವಾನುಭವವನ್ನು ಪರಿಗಣಿಸಿಯೇ ಈ ಹುದ್ದೆಯನ್ನು ನೀಡಲಾಗುತ್ತದೆ ಎಂದರು.
ಇದನ್ನೂ ಓದಿ: T20 World Cup: ಭಾರತ vs ನ್ಯೂಜಿಲೆಂಡ್ ಫೈನಲ್ ಫೈಟ್
ಟ್ರಸ್ಟ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಧರ್ಮದರ್ಶಿಗಳಾದ ಯು.ಬಿ. ವೆಂಕಟೇಶ, ಕೇಶವ ದೇಸಾಯಿ, ಟ್ರಸ್ಟ್ ಕಾರ್ಯದರ್ಶಿ ಹರಿಚನ್ನಕೇಶವ, ಸಂಪಾದಕ ಮಹಾಬಲ ಸೀತಾಳಬಾವಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಮುಖ್ಯ ವರದಿಗಾರ ನರಸಿಂಹ ರಾವ್ ಸ್ವಾಗತಿಸಿದರು. ಸಹಾಯಕ ಸಂಪಾದಕ ಕೆ.ವಿ.ಪರಮೇಶ್ ಕಾರ್ಯಕ್ರಮ ನಿರ್ವಹಿಸಿದರು.
ಮನೆ, ಮನಸ್ಸು ಗೆದ್ದ ಸಂಯುಕ್ತ ಕರ್ನಾಟಕ: ಸಂಯುಕ್ತ ಕರ್ನಾಟಕ ನಾಡಿನ ಜನರ ಮನೆ-ಮನಸ್ಸುಗಳನ್ನು ಗೆದ್ದಿದೆ. ಪತ್ರಿಕೆಯ ಕೊಡುಗೆ ಅಪಾರ. ಯಾವುದೇ ಪೂರ್ವಾಗೃಹಪೀಡಿತವಿಲ್ಲದೇ ಸುದ್ದಿಗಳು ಪ್ರಕಟವಾಗುತ್ತವೆ. ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳು ನೂರಕ್ಕೆ ನೂರರಷ್ಟು ಸಮತೋಲನವಾಗಿರುತ್ತವೆ ಹಾಗಾಗಿ ಈ ಪತ್ರಿಕೆ ನಾಡಿನ ಹೆಮ್ಮೆಯ ಪತ್ರಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿ ಹೆಣ್ಣು-ಗಂಡು ಎಂಬ ಬೇಧಭಾವ ಇರಬಾರದು. ಇಬ್ಬರಲ್ಲೂ ಸಮಾನತೆಯ ಭಾವ ಇರಬೇಕು. ನಾವೆಲ್ಲರೂ ಒಂದೇ ಮಾನಸಿಕವಾಗಿ ಸಮಾನತೆಯ ಗುಣವನ್ನು ಅಳವಡಿಸಿಕೊಂಡರೆ ಉತ್ತಮ ಬೆಳವಣಿಗೆ ಆಗಲಿದೆ. ಆಡಳಿತದಲ್ಲಿ ಮತ್ತಷ್ಟು ಉತ್ತಮ ಬದಲಾವಣೆ ತರಬೇಕೆಂಬ ತುಡಿತ ಇದೆ. ರಾಜ್ಯದಲ್ಲಿ ಸಂಪೂರ್ಣವಾಗಿ ತಪ್ಪು ಮಾಹಿತಿ ನೀಡುವುದನ್ನು ತಡೆಗಟ್ಟಬೇಕೆಂಬ ಆಶಯ ಇದೆ ಎಂದರು.
ಕೆಪಿಎಸ್ಸಿಗೆ ಯುಪಿಎಸ್ಸಿ ಮಾದರಿ: ಕೆಪಿಎಸ್ಸಿ ಪರೀಕ್ಷೆಯಲ್ಲಿ ಪ್ರತಿ ಬಾರಿಯೂ ಪರೀಕ್ಷೆ ನಡೆದಾಗ ಆಯೋಗವು ಏನಾದರೂ ಒಂದು ಎಡವಟ್ಟು ಮಾಡಿಕೊಳ್ಳುತ್ತಿದೆ. ಅದೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಇದುವರೆಗೂ ಅಂತಹ ಅಕ್ರಮ ಕಂಡು ಬಂದಿಲ್ಲ. ಹಾಗಾಗಿ ಮುಂಬರುವ ದಿನಗಳಲ್ಲಿ ಯುಪಿಎಸ್ಸಿ ಮಾದರಿಯಲ್ಲಿ ಕೆಪಿಎಸ್ಸಿ ಪರೀಕ್ಷೆ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ನನ್ನ ಆಡಳಿತ ಅವಧಿಯಲ್ಲೇ ರಾಜ್ಯದಲ್ಲಿ ಜಾರಿಗೆ ತರಬೇಕೆಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದರು. ಸಾಧನೆಗೆ ಯಾವುದೇ ರೀತಿಯ ಒಳದಾರಿ ಇಲ್ಲ.
ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಸಂಘರ್ಷ: ಓರ್ವ ಬಾಲಕ ಸಾವು
ಕಠಿಣ ಪರಿಶ್ರಮ ಮತ್ತು ಮಾಸಿಕವಾಗಿ ಗಟ್ಟಿಯಾಗಬೇಕು. ಪ್ರೇರಣೆ ಉಳಿಸಿಕೊಳ್ಳಲು ಪುಸ್ತಕಗಳನ್ನು ಓದಿ ಮತ್ತು ಸ್ಪಷ್ಟವಾದ ಗುರಿಯನ್ನು ಹೊಂದಿರಿ ಎಂದು ಕೆಪಿಎಸ್‌ಸಿ ಮತ್ತು ಯುಪಿಎಸ್ಸಿ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ಕಾರ್ಯದರ್ಶಿ ಅವರು ಸಲಹೆ ನೀಡಿದ್ದಾರೆ.
ಆರೋಗ್ಯ, ಶಿಕ್ಷಣಕ್ಕೆ ಗೃಹಲಕ್ಷ್ಮೀ: ಸರ್ಕಾರ ನೀಡುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ. ಗೃಹಲಕ್ಷಿö್ಮ ಯೋಜನೆಯಡಿಯಲ್ಲಿ ಮಹಿಳೆಯರ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡುವುದರಿಂದ ಮಹಿಳೆಯರು ಈ ಹಣವನ್ನು ವ್ಯರ್ಥ ಮಾಡುವುದಿಲ್ಲ. ಬದಲಿಗೆ ಈ ಹಣದಿಂದ ತಮ್ಮ ಮ್ಕಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಬಳಸಿಕೊಳ್ಳುತ್ತಾರೆ. ಈ ಹಣದಿಂದ ಎಷ್ಟೋ ಬಡ ಮತ್ತು ಮದ್ಯಮ ಕುಟುಂಬಗಳ ನಿರ್ವಹಣೆಗೆ ಅನುಕೂಲವಾಗುತ್ತಿದೆ ಎಂದು ಶಾಲಿನಿ ರಜನೀಶ್ ತಿಳಿಸಿದರು. ಹಿಂದಿನ ಕಾಲದಲ್ಲಿ ಮಹಿಳೆಯರು ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಇರಬೇಕಾಗಿತ್ತು.
ಆದರೆ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಶಕ್ತಿ ಯೋಜನೆಯನ್ನು ಅನುಷ್ಠಾನ ಮಾಡಿದೆ. ರಾಜ್ಯದಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ.ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ನಗರ ಪ್ರದೇಶಗಳಿಗೆ ಪ್ರತಿನಿತ್ಯ ತೆರಳುತ್ತಿದ್ದಾರೆ ಎಂದರು.
ಇದನ್ನೂ ಓದಿ: ಉತ್ತರ ಪ್ರದೇಶ ವಿವಿಗಳ ಗುಣಮಟ್ಟ ಹೆಚ್ಚಳಕ್ಕೆ ದಿಟ್ಟ ಕ್ರಮ: ರಾಜ್ಯಪಾಲೆ ಆನಂದಿಬೇನ್ ಪಟೇಲ್
ಜವಾಬ್ದಾರಿ ನಿರ್ವಹಿಸುವ ಶಕ್ತಿ ಮಹಿಳೆಯರಲ್ಲಿದೆ: ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಮಾತನಾಡಿ, ಜನರಿಗೆ ಮಾರ್ಗದರ್ಶನ ಮಾಡಲು ಲೋಕ ಶಿಕ್ಷಣ ಟ್ರಸ್ಟ್ ಸ್ಥಾಪನೆಯಾಯಿತು. ಸ್ವತಂತ್ರ ಪೂರ್ವದಲ್ಲೇ ನಮ್ಮ ಪತ್ರಿಕೆ ಪ್ರಾರಂಭವಾಯಿತು. ಸಮಾಜದ ಶ್ರೇಯಸ್ಸಿಗೆ ದುಡಿಯುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ. ಜನಪರವಾದ ಸೇವೆಗಳನ್ನು ಮಾಡುತ್ತ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಡಾ.ಶಾಲಿನಿ ರಜಿನೀಶ್ ಅವರು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆ ನಮ್ಮ ಸಂಸ್ಥೆಗೆ ಅಥಿತಿಯಾಗಿ ಭೇಟಿ ನೀಡಿರುವುದು ಸಂತಸ ತಂದಿದೆ. ಮಹಿಳಾ ಮೀಸಲಾತಿ ರಾಜಕೀಯದಲ್ಲೂ ಬರುತ್ತಿದೆ. ನ್ಯಾಯಾಂಗ, ಕಾರ್ಯಾಂಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ನಾಯಕತ್ವ ಸಿಗಬೇಕು. ಕುಟುಂಬವನ್ನೇ ಸಮರ್ಥವಾಗಿ ನಿಭಾಯಿಸುವ ಶಕ್ತಿ ಇರುವುದರಿಂದ ಸಮಾಜದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಮಹಿಳೆಯರಲ್ಲಿದೆ ಎಂದರು.























