153 ಎಕರೆಗಳಲ್ಲಿ ‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ’ – ಸಚಿವ ಸಂಪುಟದ ಒಪ್ಪಿಗೆ

0
2

ಬೆಂಗಳೂರು ನಗರಕ್ಕೆ ಮತ್ತೊಂದು ಐತಿಹಾಸಿಕ ಕೊಡುಗೆ! ನಗರದ ಮೂರನೇ ಅತಿದೊಡ್ಡ ಉದ್ಯಾನ

ಬೆಂಗಳೂರು: ಅರಣ್ಯ ಇಲಾಖೆಯಿಂದ ಅಭಿವೃದ್ಧಿಪಡಿಸಲಿರುವ ‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ’ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ಲಭಿಸಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ 153 ಎಕರೆ ವಿಸ್ತೀರ್ಣದಲ್ಲಿ ಈ ಉದ್ಯಾನ ನಿರ್ಮಾಣವಾಗಲಿದ್ದು, ಇದು ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ನಂತರದ ಬೆಂಗಳೂರು ನಗರದ ಮೂರನೇ ಅತಿದೊಡ್ಡ ಉದ್ಯಾನ ಆಗಲಿದೆ.

ಈ ಕುರಿತು ಮಾಹಿತಿ ನೀಡಿದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ, ನಗರಕ್ಕೆ ಅತ್ಯಗತ್ಯವಾದ ಶ್ವಾಸಕೋಶ ಹಾಗೂ ಮನೋಲ್ಲಾಸ ಕೇಂದ್ರವಾಗಿ ಉದ್ಯಾನವನ್ನು ರೂಪಿಸಲು ₹50 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಈ ಮಹತ್ವದ ಯೋಜನೆಗೆ ಬೆಂಬಲ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಭಾಗದ ರೈಲ್ವೆ ಅಭಿವೃದ್ಧಿಗೆ ವೇಗ

ಸಚಿವರು ಇತಿಹಾಸದ ಹಿನ್ನಲೆಯಲ್ಲಿ ವಿವರಿಸುತ್ತಾ, 1760ರಲ್ಲಿ 240 ಎಕರೆ ಪ್ರದೇಶದಲ್ಲಿ ಲಾಲ್‌ಬಾಗ್ ಮತ್ತು 1870ರಲ್ಲಿ 197 ಎಕರೆ ಪ್ರದೇಶದಲ್ಲಿ ಕಬ್ಬನ್ ಪಾರ್ಕ್ ನಿರ್ಮಾಣಗೊಂಡಿದ್ದವು. ಕಳೆದ 155 ವರ್ಷಗಳಲ್ಲಿ ನಗರದಲ್ಲಿ ಅನೇಕ ಸಣ್ಣ ಉದ್ಯಾನಗಳು ನಿರ್ಮಾಣವಾದರೂ, ಇಷ್ಟೊಂದು ದೊಡ್ಡ ವಿಸ್ತೀರ್ಣದ ಹೊಸ ಉದ್ಯಾನ ಇದುವರೆಗೆ ನಿರ್ಮಾಣವಾಗಿರಲಿಲ್ಲ ಎಂದು ಹೇಳಿದರು. ಈ ಹಿನ್ನೆಲೆ ‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ’ವನ್ನು ಬೆಂಗಳೂರು ನಗರದ ಮೂರನೇ ಪ್ರಮುಖ ಹಸಿರು ಉಸಿರಾಟ ಕೇಂದ್ರವಾಗಿ ಜನರಿಗೆ ಸಮರ್ಪಿಸಲಾಗುತ್ತದೆ ಎಂದು ತಿಳಿಸಿದರು.

ಯಲಹಂಕದ ಮಾದಪ್ಪನಹಳ್ಳಿಯಲ್ಲಿ ಇರುವ ಈ 153 ಎಕರೆ ಪ್ರದೇಶವನ್ನು ಈ ಹಿಂದೆ ಅರಣ್ಯ ಇಲಾಖೆ ನೆಡುತೋಪು ಬೆಳೆಸಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿತ್ತು. ಇದೀಗ ಆ ಜಾಗವನ್ನು ಮರಳಿ ಪಡೆದುಕೊಂಡಿದ್ದು, ಅಲ್ಲಿ ಇರುವ ನೀಲಗಿರಿ ಮರಗಳನ್ನು ಹಂತ ಹಂತವಾಗಿ ತೆಗೆದು, ನಂದಿ, ಹೊನ್ನೆ, ಬಿಲ್ವ, ಮಹಾಬಿಲ್ವ ಸೇರಿದಂತೆ ನೂರಾರು ಪ್ರಭೇದದ ದೇಶೀ ಸಸಿಗಳು ಮತ್ತು ಮರಗಳನ್ನು ನೆಟ್ಟು ಬೆಳೆಸಲು ಯೋಜಿಸಲಾಗಿದೆ.

ಇದನ್ನೂ ಓದಿ: Grok AI: ಎಕ್ಸ್‌ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ

ಉದ್ಯಾನದಲ್ಲಿ ನೆಡುವ ಪ್ರತಿಯೊಂದು ಮರದ ಬಳಿ ಅದರ ಹೆಸರು, ಪ್ರಭೇದ ಮತ್ತು ವೈಜ್ಞಾನಿಕ ಮಾಹಿತಿಯ ಫಲಕ ಅಳವಡಿಸಲಾಗುತ್ತದೆ. ಇದರ ಮೂಲಕ ಮುಂದಿನ ಪೀಳಿಗೆ ಕನಿಷ್ಠ 50ಕ್ಕೂ ಹೆಚ್ಚು ಮರಗಳನ್ನು ಗುರುತಿಸುವಷ್ಟು ಪರಿಸರ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದರು.

ಇದಲ್ಲದೆ ಉದ್ಯಾನದಲ್ಲಿ, ದಿವೌಷಧೀಯ ಸಸ್ಯವನ, ಪಕ್ಷಿ ಲೋಕ, ವೃಕೋದ್ಯಾನ (ಟ್ರೀ ಪಾರ್ಕ್) ಹಾಗೂ ಇಂಟರ್‌ಪ್ರಿಟೇಷನ್ ಸೆಂಟರ್ ನಿರ್ಮಿಸುವ ಚಿಂತನೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಧಾರವಾಡದಲ್ಲಿ ಶೀಘ್ರವೇ ಆಧಾರ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆ

ಈ ಉದ್ಯಾನ ಬಿಡಿಎ ನಿರ್ಮಿಸಿರುವ ಶಿವರಾಮಕಾರಂತ ಬಡಾವಣೆಗೆ ಸಮೀಪದಲ್ಲಿರುವುದರಿಂದ, ಉತ್ತರ ಬೆಂಗಳೂರು ಭಾಗದ ಜನರಿಗೆ ದೊಡ್ಡ ಮಟ್ಟದ ಪರಿಸರ ಮತ್ತು ಮನರಂಜನಾ ಸೌಲಭ್ಯವಾಗಲಿದೆ ಎಂದು ಸಚಿವ ಖಂಡ್ರೆ ಹೇಳಿದರು.

Previous articleಹುಬ್ಬಳ್ಳಿ-ಧಾರವಾಡ ಭಾಗದ ರೈಲ್ವೆ ಅಭಿವೃದ್ಧಿಗೆ ವೇಗ: ಧಾರವಾಡ–ಗದಗ ನಡುವೆ ಪ್ಯಾಸೆಂಜರ್ ರೈಲಿಗೆ ಚಿಂತನೆ