ಬೆಂಗಳೂರು: ಕುಡಿಯುವ ನೀರಿನ ಕುರಿತು ಪ್ರತಿಯೊಬ್ಬರೂ ಜನ ಜಾಗೃತಿ ಮೂಡಿಸಬೇಕು. ಜೀವ ಜಲ ರಕ್ಷಣೆಗಾಗಿ ಶ್ರಮಿಸಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಕರೆ ನೀಡಿದ್ದಾರೆ.
ಸಂರಕ್ಷಣೆ ಮತ್ತು ಜಲಮೂಲಗಳ ಪುನಶ್ಚೇ ತನ ಕುರಿತು ರಾಷ್ಟ್ರಮಟ್ಟದ ಸ್ವಯಂ ಸೇವಾ ಮಹಿಳಾ ಸಂಘಟನೆ “ಸಂಪೂರ್ಣ” ಮತ್ತು ತೇರಾಪಂತ್ ಮಹಿಳಾ ಮಂಡಲ, ವಿಜಯನಗರ ಸಂಘಟನೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನೆಲ, ಜಲ ಸಂರಕ್ಷಣೆಗೆ ವಿಶೇಷವಾಗಿ ಯುವ ಸಮೂಹ ಮುಂದಾಗಬೇಕು. ಆದರೆ ಮಹಿಳಾ ಸಂಘಟನೆಗಳು ಇಂತಹ ಮಹೋನ್ನತ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಇಂತಹ ರಚನಾತ್ಮಕ ಹೋರಾಟಕ್ಕೆ ಪ್ರತಿಯೊಬ್ಬರೂ ಬೆಂಬಲಿಸಬೇಕು ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳಲಿದೆ. ಹೀಗಾಗಿ ಈಗಿನಿಂದಲೇ ಜಲ ಸಾಕ್ಷರತೆ ಬಗ್ಗೆ ಅರಿವು ಮೂಡಿಸಬೇಕು. ಮುಂದಿನ ಪೀಳಿಗೆಗೆ ಸಮೃದ್ಧ ಜಲ ಸಂಪತ್ತನ್ನು ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಸಂಪೂರ್ಣ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಶೋಭಾ ವಿಜಯೇಂದ್ರ ಸಿಂಗ್ ಮಾತನಾಡಿ, ನಮ್ಮ ಸಂಘಟನೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಎರಡನೇ ಅಭಿಯಾನ ಇದಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು. ವಿಚಾರ ಸಂಕಿರಣದ ಸಂಚಾಲಕರಾದ ವೀಣಾ ಬೇದ್, ಮಾಧ್ಯಮ ಸಂಚಾಲಕರಾದ ಚಂದ್ರಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.


























