ಬೆಂಗಳೂರು: ರಾಜ್ಯ ಸರ್ಕಾರದ ವಿವಾದಿತ ಟನಲ್ ರೋಡ್ ಯೋಜನೆಗೆ (Tunnel Road Project) ವಿರೋಧ ವ್ಯಕ್ತಪಡಿಸಿದ ಬಿಜೆಪಿ ನಾಯಕರು, “ಟನಲ್ ರೋಡ್ ನಿಲ್ಲಿಸಿ – ಬೆಂಗಳೂರು ರಕ್ಷಿಸಿ” ಘೋಷಣೆಯಡಿ ಸಹಿ ಸಂಗ್ರಹ ಅಭಿಯಾನ ಪ್ರಾರಂಭಿಸಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ನೇತೃತ್ವದಲ್ಲಿ ಲಾಲ್‌ಬಾಗ್ ಗುಡ್ಡದ ಮೇಲೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅನೇಕ ಪರಿಸರ ಪ್ರೇಮಿಗಳು ಮತ್ತು ನಾಗರಿಕರು ಸಹ ಈ ಶಾಂತ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಅಭಿಯಾನ ಆರಂಭಿಸಿದ ಬಳಿಕ ಮಾತನಾಡಿದ ಆರ್. ಅಶೋಕ್ ಹೇಳಿದರು, “ಟನಲ್ ರೋಡ್ ಯೋಜನೆ ಬೆಂಗಳೂರಿನ ಪರಿಸರ, ಇತಿಹಾಸ ಮತ್ತು ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತ. ಇದು ‘ವಿಐಪಿ ಕಾರಿಡಾರ್’, ಸಾಮಾನ್ಯ ಜನರಿಗಾಗಿ ಅಲ್ಲ. ಬಡ ಮತ್ತು ಮಧ್ಯಮ ವರ್ಗದವರು, ಬೈಕ್ ಅಥವಾ ಸೈಕಲ್ ಸವಾರರು ಇದರಲ್ಲಿ ಸಂಚರಿಸಲು ಸಾಧ್ಯವಿಲ್ಲ,” ಎಂದು ವಾಗ್ದಾಳಿ ನಡೆಸಿದರು.
ಅವರು ಮುಂದುವರಿಸಿ, “ಸರ್ಕಾರ 8,000 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಟೆಂಡರ್ ಕರೆದಿದೆ. 4,000 ಕೋಟಿ ಪೇಮೆಂಟ್ ಕೊಡಬೇಕಾಗಿದೆ. ಈ ಹಣ ಸಾಲದಿಂದ ಬರಲಿದೆ, ಬಡ್ಡಿ ಹೇಗೆ ತೀರಿಸಲಿದ್ದಾರೆ? ಇದು ಜನರ ಹಣದ ಲೂಟಿ ಯೋಜನೆ. ಒಂದು ಕಿ.ಮೀಗೆ ₹1,800 ಕೋಟಿ ಖರ್ಚಾಗುತ್ತೆ. ಇಷ್ಟೊಂದು ಹಣದಲ್ಲಿ 5 ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣ ಮಾಡಬಹುದು. ಆದರೆ ಮೆಟ್ರೋದಲ್ಲಿ ಕಮಿಷನ್ ಸಿಗೋದಿಲ್ಲ, ಟನಲ್ ರೋಡ್‌ನಲ್ಲಿ ಸಿಗುತ್ತದೆ,” ಎಂದು ಆರೋಪಿಸಿದರು.
ಅಶೋಕ್ ಅವರು ಸರ್ಕಾರದ ವಿರುದ್ಧ ಗರಂ ಆಗಿ ಮಾತನಾಡುತ್ತಾ, “ಕೆಂಪೇಗೌಡರು ಶಿಲೆ ಮೇಲೆ ಕಟ್ಟಿದ ಈ ನಗರದಲ್ಲಿ ಸುರಂಗ ತೆಗೆಯಲು ಹೋಗುವುದು ಬೆಂಗಳೂರು ಕೊಲೆ ಮಾಡೋದಕ್ಕೆ ಸಮಾನ. ಕಾನೂನು ಪ್ರಕಾರ ಪರ್ಮಿಷನ್ ಬೇಕಾದ 120 ಇಲಾಖೆಯಿಂದ ಒಂದರ ಪರ್ಮಿಷನ್ ಕೂಡ ಪಡೆದಿಲ್ಲ. ಲಾಲ್‌ಬಾಗ್‌ನಲ್ಲಿ ಬೋರ್ಡ್ ಹಾಕಿ ಪರಿಸರ ಕೊಲೆ ಮಾಡೋದಕ್ಕೆ ಹೊರಟಿದ್ದಾರೆ. ಇದು ಕೇವಲ ಹಣದ ಪ್ಲ್ಯಾನ್,” ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕರು ಟನಲ್ ಯೋಜನೆ ಬದಲಿಗೆ ಮೆಟ್ರೋ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.



























