ಬೆಂಗಳೂರು 5 ನಗರ ಪಾಲಿಕೆ ಚುನಾವಣೆಗೆ ಸುಪ್ರೀಂ ಕೋರ್ಟ್ ನಿರ್ದೇಶನ

0
3

ಮಾರ್ಚ್ 16ರೊಳಗೆ ಮತದಾರರ ಪಟ್ಟಿ ಅಂತಿಮ, ಫೆಬ್ರವರಿ 20ರೊಳಗೆ ಮೀಸಲಾತಿ ಅಧಿಸೂಚನೆ ಪ್ರಕಟ – ಜೂನ್ 30ರೊಳಗೆ ಚುನಾವಣೆ

ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಡಿ ರಚನೆಯಾಗಿರುವ ಐದು ನಗರ ಪಾಲಿಕೆಗಳಿಗೆ ಸುದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಚುನಾವಣೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅವಧಿ ಮುಗಿದು ವರ್ಷಗಳಾದರೂ ಚುನಾವಣೆ ನಡೆಯದೇ ಮುಂದೂಡಲ್ಪಟ್ಟಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಚುನಾವಣೆ ಸಂಬಂಧಿತ ಸ್ಪಷ್ಟ ಕಾಲಮಿತಿಯನ್ನು ನಿಗದಿ ಮಾಡಿದೆ.

ಇದನ್ನೂ ಓದಿ:  PSLV-C62 ಉಡಾವಣೆ: PS3ಯ ಕೊನೆಯ ಹಂತದಲ್ಲಿ ಅಡಚಣೆ

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ, ಬಿಬಿಎಂಪಿ ಚುನಾವಣೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗ ಲಿಖಿತ ದಾಖಲೆಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು.

ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿ, ಮೀಸಲಾತಿಗೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ಈಗಾಗಲೇ ಹೊರಡಿಸಲಾಗಿದೆ ಎಂದು ಕೋರ್ಟ್‌ಗೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಫೆಬ್ರವರಿ 20ರೊಳಗೆ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಬೇಕು ಎಂದು ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿತು.

ಇದನ್ನೂ ಓದಿ:  ಭಾರತೀಯ ಅಂತರಿಕ್ಷ ನಿಲ್ದಾಣಕ್ಕೆ ಶತಪ್ರಯತ್ನ

ಮಾರ್ಚ್ 16ರೊಳಗೆ ಮತದಾರರ ಪಟ್ಟಿ ಅಂತಿಮ: ಚುನಾವಣಾ ಪ್ರಕ್ರಿಯೆಯ ಪ್ರಮುಖ ಹಂತಗಳ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡಿದ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ, ಮಾರ್ಚ್ 16ರೊಳಗೆ ಮತದಾರರ ಪಟ್ಟಿ ಅಂತಿಮಗೊಳ್ಳಲಿದೆ. ಮಾರ್ಚ್ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಸೇರಿದಂತೆ ವಿವಿಧ ಸಾರ್ವಜನಿಕ ಪರೀಕ್ಷೆಗಳು ನಡೆಯಲಿರುವುದರಿಂದ, ತಕ್ಷಣ ಚುನಾವಣೆ ಸಾಧ್ಯವಿಲ್ಲ. ಹೀಗಾಗಿ ಮೇ 26ರೊಳಗೆ ಚುನಾವಣಾ ದಿನಾಂಕ ಘೋಷಿಸಿ, ಜೂನ್ ತಿಂಗಳೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಮುಗಿಸಲಾಗುವುದು ಎಂದು ಕೋರ್ಟ್‌ಗೆ ಭರವಸೆ ನೀಡಿದರು.

ಐದು ಪಾಲಿಕೆಗಳಾಗಿ ವಿಭಜನೆಯಾದ ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಯ ನಂತರ, ಬೆಂಗಳೂರು ನಗರವನ್ನು ಐದು ನಗರ ಪಾಲಿಕೆಗಳಾಗಿ ಪುನರ್‌ರಚಿಸಲಾಗಿದೆ. ಆದರೆ ಈ ಹೊಸ ಪಾಲಿಕೆಗಳಿಗೆ ಇದುವರೆಗೆ ಚುನಾವಣೆ ನಡೆಯದೇ, ಆಡಳಿತಾಧಿಕಾರಿಗಳ ಮೂಲಕವೇ ಆಡಳಿತ ಮುಂದುವರಿದಿರುವುದು ಜನಪ್ರತಿನಿಧಿತ್ವದ ತತ್ವಕ್ಕೆ ವಿರುದ್ಧ ಎಂಬ ಆಕ್ಷೇಪಗಳು ಕೇಳಿಬಂದಿದ್ದವು.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವು ಬೆಂಗಳೂರು ನಗರ ಆಡಳಿತಕ್ಕೆ ಜನಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆಗೆ ದಾರಿ ತೆರೆದ ಮಹತ್ವದ ತೀರ್ಪು ಎನ್ನಲಾಗಿದೆ.

Previous article‘ಕರಿಕಾಡ’ನ ಸಾಹಸ–ಪ್ರೇಮದ ದೃಶ್ಯಕಾವ್ಯಕ್ಕೆ ‘ರತುನಿʼ ಸೇರ್ಪಡೆ