Home ನಮ್ಮ ಜಿಲ್ಲೆ ಬೆಂಗಳೂರು ‘ಸಿನ್‌ಕ್ವಿಜಿಟಿವ್’ನ ವಿಜ್ಞಾನ ಕ್ವಿಜ್: ವಿಜೇತರ ಘೋಷಣೆ

‘ಸಿನ್‌ಕ್ವಿಜಿಟಿವ್’ನ ವಿಜ್ಞಾನ ಕ್ವಿಜ್: ವಿಜೇತರ ಘೋಷಣೆ

0
5

ಬೆಂಗಳೂರು: ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನಾ ಸೇವೆಗಳನ್ನು ಒದಗಿಸುವ ಸಂಸ್ಥೆಯಾಗಿರುವ ಸಿಂಜೀನ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಂಸ್ಥೆಯು ಇಂದು ತನ್ನ ನಾಲ್ಕನೇ ಆವೃತ್ತಿಯ ಸಿನ್‌ಕ್ವಿಜಿಟಿವ್ ವಾರ್ಷಿಕ ವಿಜ್ಞಾನ ಕ್ವಿಜ್‌ನ ವಿಜೇತರನ್ನು ಘೋಷಿಸಿದೆ.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ವೈಜ್ಞಾನಿಕ ಕುತೂಹಲವನ್ನು ಬೆಳೆಸಿ, ವಿಜ್ಞಾನದಲ್ಲಿ ಉತ್ತಮವಾದ ಚಿಂತನಾ ಅಡಿಪಾಯವನ್ನು ಹಾಕಿಕೊಡುವ ಉದ್ದೇಶದಿಂದ ಈ ಪ್ರಮುಖವಾದ ವಿಜ್ಞಾನ ಕ್ವಿಜ್ ಅನ್ನು ಆಯೋಜಿಸಲಾಗುತ್ತದೆ. ಬಯೋಕಾನ್ ಫೌಂಡೇಶನ್ ಮತ್ತು ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಶನ್ ಜೊತೆಗಿನ ಸಹಕಾರದಲ್ಲಿ ನಡೆಸಲ್ಪಟ್ಟ ಈ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ತೆಲಂಗಾಣದ 200 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಒಟ್ಟಾರೆ ಭಾಗವಹಿಸಿದ್ದ 200 ಶಾಲೆಗಳಲ್ಲಿ ಹೈದರಾಬಾದ್‌ನ ಸಾಹೇಬ್ ನಗರ ಜಿಲ್ಲಾ ಪರಿಷತ್ ಹೈಸ್ಕೂಲ್, ಮಂಗಳೂರಿನ ಪಾಂಡೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬೆಂಗಳೂರಿನ ಅಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ವಿಜೇತರಾಗಿ ಹೊರಹೊಮ್ಮಿದ್ದು, ಈ ವಿಜೇತರನ್ನು ಬಹು ಕಠಿಣವಾದ ಬಹು ಹಂತದ ಸ್ಪರ್ಧೆಯ ನಂತರ ಆಯ್ಕೆ ಮಾಡಲಾಗಿದೆ. ನಾಲ್ಕು ಆವೃತ್ತಿಗಳಲ್ಲಿ ಸಿನ್‌ಕ್ವಿಜಿಟಿವ್ ಸುಮಾರು 30,000 ವಿದ್ಯಾರ್ಥಿಗಳನ್ನು ತಲುಪಿದ್ದು, ಸಂಪನ್ಮೂಲಗಳ ಕೊರತೆಯಿರುವ ಹಿನ್ನೆಲೆಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅನ್ವಯಿಕ ವಿಜ್ಞಾನ (ಅಪ್ಲೈಡ್ ಸೈನ್ಸ್) ಕಲಿಕೆಯ ಅವಕಾಶವನ್ನು ಒದಗಿಸಿದೆ.

ಬೆಂಗಳೂರು ಭಾಗದ ಗ್ರಾಂಡ್ ಫೈನಲ್ ಕಾರ್ಯಕ್ರಮವು ಬೆಂಗಳೂರಿನ ಸೈನ್ಸ್ ಗ್ಯಾಲರಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಯೋಕಾನ್ ಗ್ರೂಪ್‌ನ ಅಧ್ಯಕ್ಷರಾದ ಕಿರಣ್ ಮಜುಂದಾರ್ ಷಾ, ಕೆ.ಕೆ ನಾಗರತ್ನ, ಹಿರಿಯ ಕಾರ್ಯಕ್ರಮ ಅಧಿಕಾರಿ, ಸಮಗ್ರ ಶಿಕ್ಷಣ ಕರ್ನಾಟಕ, ಐಐಎಸ್‌ಸಿ ಪ್ರೊಫೆಸರ್ ಡಾ. ಗಾಲಿ ಮಾಧವಿ ಲತಾ, ಬಯೋಕಾನ್ ಫೌಂಡೇಶನ್‌ನ ಮಿಷನ್ ಡೈರೆಕ್ಟರ್ ಡಾ. ಅನುಪಮಾ ಎನ್ ಶೆಟ್ಟಿ, ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಶನ್‌ನ ಸಂಸ್ಥಾಪಕರು ಮತ್ತು ಚೇರ್‌ಪರ್ಸನ್ ಶ್ರೀರಾಮ್ ರಾಘವನ್ ಮತ್ತು ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಶನ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಕೆ. ತ್ಯಾಗರಾಜನ್ ಭಾಗವಹಿಸಿದ್ದರು.

ಯುವ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಣವನ್ನು ಆಕರ್ಷಕವಾಗಿ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಅಗತ್ಯವನ್ನು ಒತ್ತಿಹೇಳಿದ ಬಯೋಕಾನ್ ಗ್ರೂಪ್‌ನ ಅಧ್ಯಕ್ಷರಾದ ಕಿರಣ್ ಮಜುಂದಾರ್ ಷಾ ಅವರು, “ಸಿನ್‌ಕ್ವಿಜಿಟಿವ್ ಎನ್ನುವುದು ಕೇವಲ ಸ್ಪರ್ಧೆಯಲ್ಲ; ಇದು ಪ್ರಶ್ನೆಗಳನ್ನು ಕೇಳುವುದು, ಗಾಢವಾಗಿ ಯೋಚಿಸುವುದು ಮತ್ತು ಹೊಸ ಹುಡುಕಾಟಯನ್ನು ಆನಂದಿಸುವುದೇ ಶಿಕ್ಷಣದ, ಅದರಲ್ಲೂ ವಿಶೇಷವಾಗಿ ವಿಜ್ಞಾನದ ಜೀವಾಳ ಎಂಬುದನ್ನು ನಮಗೆ ನೆನಪಿಸುತ್ತದೆ. ಗುಣಮಟ್ಟದ ವಿಜ್ಞಾನ ಶಿಕ್ಷಣವು ಪ್ರತಿಯೊಬ್ಬ ಮಗುವಿಗೂ ಸುಲಭವಾಗಿ ಸಿಗುವಂತಾಗಬೇಕು, ಆಕರ್ಷಕವಾಗಿ ಮತ್ತು ಅರ್ಥಪೂರ್ಣವಾಗಿ ದಾಟಿಸುವಂತಾಗಬೇಕು ಎಂಬುದು ಸಿಂಜೀನ್ ಮತ್ತು ಬಯೋಕಾನ್ ಫೌಂಡೇಶನ್ ನ ನಂಬಿಕೆಯಾಗಿದೆ” ಎಂದು ಹೇಳಿದರು.

ಸಿಂಜೀನ್ ಸಂಸ್ಥೆಯ ತಳ ಮಟ್ಟದಲ್ಲಿ ವೈಜ್ಞಾನಿಕ ಕುತೂಹಲವನ್ನು ಬೆಳೆಸುವ ಧ್ಯೇಯಕ್ಕೆ ಪೂರಕವಾಗಿ ಮಾತನಾಡಿರುವ ಸಿಂಜೀನ್ ಇಂಟರ್ ನ್ಯಾಷನಲ್ ನ ಕಾರ್ಪೊರೇಟ್ ಅಫೇರ್ಸ್ ಮುಖ್ಯಸ್ಥ ಪ್ರಮುಚ್ ಗೋಯೆಲ್ ಅವರು, “ಸಿನ್‌ಕ್ವಿಜಿಟಿವ್ ಒಂದು ಸಾಧಾರಣ ವಿಜ್ಞಾನ ಕ್ವಿಜ್ ಅನ್ನುವುದನ್ನು ಮೀರಿ ಒಂದು ಮಹತ್ವದ ಕಲಿಕಾ ವೇದಿಕೆಯಾಗಿ ಬೆಳೆದಿದೆ. ಇದು ಸರ್ಕಾರಿ ಶಾಲಾ ವಿದ್ಯಾರ್ಥಿಗಳು ತಮ್ಮ ಕುತೂಹಲವನ್ನು ವ್ಯಕ್ತಪಡಿಸಲು, ಪ್ರಶ್ನೆಗಳನ್ನು ಕೇಳಲು ಮತ್ತು ವಿಜ್ಞಾನದೊಂದಿಗೆ ಆತ್ಮವಿಶ್ವಾಸದಿಂದ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಒಳಗೊಳ್ಳುವಿಕೆಯ ಮತ್ತು ಸಂವಾದಾತ್ಮಕವಾಗಿ ವಿನ್ಯಾಸಗೊಳಿಸಲ್ಪಟ್ಟ ಈ ಕಾರ್ಯಕ್ರಮವು ವಿವಿಧ ಹಿನ್ನೆಲೆಯ ಶಾಲೆಗಳು ಮತ್ತು ಸಮುದಾಯಗಳನ್ನು ಒಟ್ಟುಗೂಡಿಸಿ, ಆಲೋಚನೆಗಳು ಮತ್ತು ಅನುಭವಗಳ ಹಂಚಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮತ್ತು ಉತ್ಸಾಹ ಹೆಚ್ಚುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದು ಚಿಕ್ಕಂದಿನಲ್ಲಿಯೇ ವೈಜ್ಞಾನಿಕ ಆಸಕ್ತಿಯನ್ನು ಬೆಳೆಸುವುದು ಎಷ್ಟು ಮುಖ್ಯ ಎಂಬ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ. ವಿಜ್ಞಾನ ಆಧಾರಿತ ಸಂಸ್ಥೆಯಾಗಿ, ಭಾರತದ ಸಂಶೋಧನಾ ವ್ಯವಸ್ಥೆಗೆ ಮತ್ತು ಜಾಗತಿಕ ಸಂಶೋಧನೆ – ಅಭಿವೃದ್ಧಿಗೆ ಕೊಡುಗೆ ನೀಡುವ ಭವಿಷ್ಯದ ಪ್ರತಿಭೆಗಳ ಉತ್ಕೃಷ್ಟವಾದ ಸಮೂಹ ನಿರ್ಮಾಣದಲ್ಲಿ ಇದನ್ನು ಮುಖ್ಯ ಹೆಜ್ಜೆಯೆಂದು ನಾವು ನೋಡುತ್ತೇವೆ” ಎಂದು ಹೇಳಿದರು.

ಈ ಕ್ವಿಜ್ ಒಂದು ನಿರ್ದಿಷ್ಟ ರೂಪವನ್ನು ಹೊಂದಿದ್ದು, ಪಠ್ಯಕ್ರಮಕ್ಕೆ ಸಂಬಂಧಿಸಿದ ಪರಿಕಲ್ಪನೆಗಳು ಮತ್ತು ನಿಜಜೀವನದ ಅಪ್ಲಿಕೇಷನ್‌ಗಳ ಆಧಾರದಲ್ಲಿ ಪ್ರಾಥಮಿಕ ಹಂತ ನಡೆಯಿತು. ಈ ಹಂತದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ತಾರ್ಕಿಕ ಚಿಂತನೆ, ಸಮಸ್ಯೆ ಪರಿಹಾರ ಮತ್ತು ತಂಡಕಾರ್ಯವನ್ನು ಪರೀಕ್ಷಿಸುವ ಸಂವಾದಾತ್ಮಕ ಹಂತಕ್ಕೆ ಪ್ರವೇಶಿಸಿದರು. ಸಿಂಜೀನ್ ನೌಕರರು ಸ್ವಯಂಸೇವಕರಾಗಿ ಭಾಗವಹಿಸಿ ಮಾರ್ಗದರ್ಶಕರು ಮತ್ತು ಸಮನ್ವಯಕಾರರಾಗಿ ಸಹಾಯ ಮಾಡಿದರು. ಇದರಿಂದ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ತೊಡಗಿಸಿಕೊಳ್ಳುವ ಮೂಲಕ ಆತ್ಮವಿಶ್ವಾಸ ಮತ್ತು ವಿಶ್ಲೇಷಣಾ ಕೌಶಲ್ಯಗಳನ್ನು ಬೆಳೆಸಿಕೊಂಡರು.

ಕ್ವಿಜ್ ಹಿಂದಿನ ಕಲಿಕಾ ಸಿದ್ಧಾಂತದ ಕುರಿತು ಮಾತನಾಡಿದ ಬಯೋಕಾನ್ ಫೌಂಡೇಶನ್‌ನ ಮಿಷನ್ ಡೈರೆಕ್ಟರ್ ಡಾ. ಅನುಪಮಾ ಶೆಟ್ಟಿ ಅವರು, “ಸಿನ್‌ಕ್ವಿಜಿಟಿವ್ ಅನ್ನು ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ. ಇದು ವಿದ್ಯಾರ್ಥಿಗಳನ್ನು ಪಠ್ಯಪುಸ್ತಕ ಕಲಿಕೆಯಿಂದ ಹೊರತಾಗಿ ಪ್ರಶ್ನೆಗಳನ್ನು ಕೇಳಲು, ವಿಮರ್ಶಾತ್ಮಕವಾಗಿ ಚಿಂತಿಸಲು ಮತ್ತು ಪರಿಕಲ್ಪನೆಗಳನ್ನು ನಿಜಜೀವನ ಸನ್ನಿವೇಶಗಳಿಗೆ ಅನ್ವಯಿಸಲು ಪ್ರೋತ್ಸಾಹಿಸುತ್ತದೆ. ಮಾರ್ಗದರ್ಶನ ಮತ್ತು ಪ್ರಾಯೋಗಿಕ ಸಮಸ್ಯೆ ಪರಿಹಾರ ಸವಾಲುಗಳ ಸಂಯೋಜನೆಯ ಮೂಲಕ ಈ ಕಾರ್ಯಕ್ರಮ ಕುತೂಹಲವನ್ನು ಬೆಳೆಸಿ ವಿಜ್ಞಾನ ವಿಚಾರದಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ವಿಶೇಷವಾಗಿ ಇಂತಹ ಪ್ರಾಯೋಗಿಕ ಕಲಿಕಾ ಅವಕಾಶಗಳಿಗೆ ಪ್ರವೇಶವಿಲ್ಲದ ವಿದ್ಯಾರ್ಥಿಗಳಿಗೆ. ಕ್ವಿಜ್ ಅನ್ನು ಮೀರಿದ ದೀರ್ಘಕಾಲೀನ ವಿಜ್ಞಾನ ಆಸಕ್ತಿಯನ್ನು ಬೆಳೆಸುವುದು ನಮ್ಮ ಗುರಿಯಾಗಿದೆ” ಎಂದು ಹೇಳಿದರು.

ವಿಜೇತ ವಿದ್ಯಾರ್ಥಿಗಳಿಗೆ ಪದಕಗಳು ಮತ್ತು ನಗದು ಬಹುಮಾನಗಳನ್ನು ನೀಡಲಾಯಿತು. ಅವರ ಶಾಲೆಗಳು ಎಜುಟೆಕ್ ಸಾಧನಗಳೊಂದಿಗೆ ಸಜ್ಜುಗೊಳಿಸಿದ ಆಧುನಿಕ ತರಗತಿಗಳನ್ನು ಹೊಂದಲಿವೆ. ಇದರಿಂದ ಸಂವಾದಾತ್ಮಕ ಡಿಜಿಟಲ್ ಕಲಿಕಾ ಸ್ಥಳಗಳು ರೂಪುಗೊಳ್ಳಲಿವೆ. ಒಟ್ಟಾರೆ ಉತ್ತಮ ಪ್ರದರ್ಶನ ನೀಡಿದ ಶಾಲೆಗೆ ರೋಲಿಂಗ್ ಟ್ರೋಫಿಯನ್ನು ಸಹ ನೀಡಲಾಗಿದೆ.