ಬೆಂಗಳೂರು: ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಗೊಂದಲ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ಅಸ್ಸಾಂ ಚುನಾವಣೆ ನಿಮಿತ್ತ ದೆಹಲಿಗೆ ತೆರಳಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅಲ್ಲಿಯೇ ಠಿಕಾಣಿ ಹೂಡಿದ್ದಾರೆ.
ಸಿಎಂ ಆಪ್ತ ಸಚಿವ ಕೆ.ಜೆ. ಜಾರ್ಜ್ ದಿಢೀರಾಗಿ ದೆಹಲಿಗೆ ತೆರಳಿ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಬಂದ ಬೆನ್ನಲ್ಲೇ ಇದೀಗ ಮತ್ತೋರ್ವ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಕೂಡಾ ವರಿಷ್ಠರ ಭೇಟಿಗೆ ಮುಂದಾಗಿದ್ದಾರೆ. ಅವರು ಜ. 21ಕ್ಕೆ ದೆಹಲಿಗೆ ತೆರಳುತ್ತಿದ್ದು, ಕೆಲ ಸಿದ್ದರಾಮಯ್ಯ ಆಪ್ತ ಸಚಿವರು ಕೂಡ ಹೋಗುವ ಸಾಧ್ಯತೆ ಇದೆ. ಸಹಜವಾಗಿಯೇ ಈ ಬೆಳವಣಿಗೆ ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಕೆಸಿವಿ ಜೊತೆ ಹಲವು ವಿಷಯ ಚರ್ಚೆ: ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್, ನಾಯಕತ್ವದ ಗೊಂದಲ ಹೈಕಮಾಂಡ್ ಗಮನದಲ್ಲೂ ಇದ್ದು, ನಾವು ಪದೇ ಪದೇ ಮನವಿ ಮಾಡುವ ಅವಶ್ಯಕತೆಯಿಲ್ಲ. ಜ. 21ಕ್ಕೆ ದೆಹಲಿಗೆ ಹೋಗುತ್ತಿದ್ದೇನೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣ ಕುರಿತ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ನಾಯಕತ್ವದ ವಿಚಾರವಾಗಿ ಹಲವು ಸಚಿವರು ಹಾಗೂ ಶಾಸಕರು ವಿಭಿನ್ನ ಹೇಳಿಕೆಗಳಿಂದ ಸರ್ಕಾರಕ್ಕೆ ತೊಂದರೆಯಾದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಅಧಿವೇಶನದ ಬೆನ್ನಲ್ಲೇ ಭೇಟಿ: ಶುಕ್ರವಾರ ಅನಿರೀಕ್ಷಿತ ವಿದ್ಯಮಾನದಲ್ಲಿ ಸಚಿವ ಜಾರ್ಜ್ ಸಿಎಂ ಸೂಚನೆಯಂತೆ ದೆಹಲಿಗೆ ತೆರಳಿ ಡಿಸಿಎಂ ಡಿಕೆಶಿಗೂ ಮುನ್ನವೇ ರಾಹುಲ್‌ಗಾಂಧಿ ಭೇಟಿ ಮಾಡಿ ರಾಜ್ಯದ ನಾಯಕತ್ವ ಬದಲಾವಣೆ ಸಾಧಕ-ಬಾಧಕಗಳ ಕುರಿತು ಮನವರಿಕೆ ಮಾಡಿಬಂದಿದ್ದಾರೆ ಎನ್ನಲಾಗಿದೆ. ಇದರ ಮುಂದುವರಿದ ಭಾಗವಾಗಿ ಸತೀಶ್ ವರಿಷ್ಠರ ಭೇಟಿಗೆ ಯೋಜಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚಿಸಿಯೇ ದೆಹಲಿ ಪ್ರವಾಸ ನಿಗದಿಯಾಗಿದೆ ಎನ್ನಲಾಗಿದೆ. ಜ. 22ರಿಂದ ವಿಶೇಷ ಅಧಿವೇಶನ ಸಮಾವೇಶಗೊಳ್ಳಲಿದ್ದು ಅದಕ್ಕೆ ಮುನ್ನವೇ ಹೈಕಮಾಂಡ್ ನಾಯಕರ ಜೊತೆಗಿನ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ.























