ಬೆಂಗಳೂರು ನಗರದ ಜಕ್ಕೂರು ಎರೋಡ್ರೋಂ ರನ್‌ವೇ ವಿಸ್ತರಣೆ ಮಾಡುವುದು ಹಾಗೂ ಈ ಜಾಗವನ್ನು ಸಂಪೂರ್ಣವಾಗಿ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಸರ್ಕಾರದಿಂದ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಹಾಗೂ ಏರೋಡೋಂ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇದಕ್ಕೂ ಮೊದಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳ ಜೊತೆ ಸಿದ್ದರಾಮಯ್ಯ ಜಕ್ಕೂರು ಎರೋಡ್ರೋಂ ವೀಕ್ಷಣೆ ಮಾಡಿದರು.
ಈ ಬಗ್ಗೆ ಸರ್ಕಾರದ ಮುಂದೆ 2 ಯೋಜನೆಗಳಿವೆ. ಇಲ್ಲಿ ಮೇಲ್ಸೇತುವೆ ಬಂದಿರುವುದರಿಂದ ಸ್ವಲ್ಪ ಅಡಚಣೆಯಾಗುತ್ತಿದೆ. ಮೇಲ್ಸೇತುವೆ ಬರುವ ಬಗ್ಗೆ ಮೊದಲೇ ತಿಳಿದಿರಲಿಲ್ಲ. ಇಲ್ಲಿ 200 ಎಕರೆಗಿಂತಲೂ ಹೆಚ್ಚಿನ ಸ್ಥಳವಿದ್ದು, ಜಕ್ಕೂರು ವೈಮಾನಿಕ ತರಬೇತಿ ಶಾಲೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ರನ್‌ವೇ ವಿಸ್ತರಣೆಗೆ ಪಕ್ಕದಲ್ಲಿಯೇ ಜಮೀನನ್ನು ಪಡೆಯಬೇಕು. ಇದಕ್ಕೆ 3 ಎಕರೆಗಿಂತ ಹೆಚ್ಚು ಜಮೀನಿನ ಅಗತ್ಯವಿದೆ ಎಂದರು.
ಮಾಲೀಕರು ಜಮೀನನ್ನು ಕೊಡುವುದಿಲ್ಲ ಎಂದು ಹೇಳುತ್ತಿದ್ದು, ಬೆಲೆ ಕೂಡ ದುಬಾರಿ ಆಗಿದೆ. ಲಭ್ಯ ಸ್ಥಳವನ್ನು ಹೇಗೆ ಉಪಯೋಗಿಸಬೇಕು ಎಂದು ಚಿಂತನೆ ನಡೆಯುತ್ತಿದೆ. ವೈಮಾನಿಕ ತರಬೇತಿ ಶಾಲೆ ನಡೆಸಬೇಕೆನ್ನುವ ನ್ಯಾಯಾಲಯದ ಆದೇಶವಿದ್ದು, ಸರ್ಕಾರ ಅದನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದರು.
ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಜಕ್ಕೂರಿನಲ್ಲಿರುವ ಸರ್ಕಾರಿ ಫ್ಲೈಯಿಂಗ್ ತರಬೇತಿ ಶಾಲೆಯ 75 ಎಕರೆ ಭೂಮಿಯನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಖಾಸಗಿ ವ್ಯಕ್ತಿಗೆ ಏರೋ ಕ್ಲಬ್ ಸ್ಥಾಪಿಸಲು ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ನೀಡಲು ರಾಜ್ಯ ಸರ್ಕಾರ ಪ್ರಯತ್ನ ನಡೆಸಿದೆ ಎಂಬ ಆರೋಪ ಕೇಳಿ ಬಂದಿತ್ತು.
ಆಗ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಈ ವರದಿಯನ್ನು ತಳ್ಳಿ ಹಾಕಿದ್ದರು. ರಾಜ್ಯ ಸರ್ಕಾರ ಫ್ಲೈಯಿಂಗ್ ಸ್ಕೂಲ್ ಮೇಲ್ದರ್ಜೆಗೇರಿಸಲು ಮತ್ತು ಪುನರುಜ್ಜೀವನಗೊಳಿಸಲು ಯೋಜನೆ ರೂಪಿಸಿದೆ ಎಂದು ಹೇಳಿದ್ದರು.
ಸಿಮ್ಯುಲೇಟರ್, ಹ್ಯಾಂಗರ್ ಮತ್ತು ಇತರ ಸೌಕರ್ಯಗಳಂತಹ ಏರೋಡ್ರೋಮ್ ಅನ್ನು ಅಭಿವೃದ್ಧಿಪಡಿಸುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಹೊಂದಿದೆ. ವಾಯುಯಾನ ಜ್ಞಾನ ಕೇಂದ್ರ, ನೆಲದ ಸಿಬ್ಬಂದಿ ತರಬೇತಿ, ವಸ್ತುಸಂಗ್ರಹಾಲಯ, ಸಾಹಸ ಕ್ರೀಡೆಗಳು, ಡ್ರೋನ್ ಹಾರಾಟ ತರಬೇತಿ, ಹೆಲಿ ಪ್ರವಾಸೋದ್ಯಮ ಮತ್ತು ಇತರವು ಸೇರಿವೆ ಎಂದು ಸರ್ಕಾರ ಹೇಳಿತ್ತು.