ಮೌಡ್ಯ, ಕಂದಾಚಾರಗಳಿಂದ ಮಕ್ಕಳು ದೂರ ಉಳಿಯಬೇಕು

0
31

ಬೆಂಗಳೂರು: ದೇಶದ ಭವಿಷ್ಯ ರೂಪಿತ ಆಗುವುದು ವೈಚಾರಿಕ – ವೈಜ್ಞಾನಿಕ ಮನೋಭಾವದ ಮಕ್ಕಳಿಂದ. ಆದ್ದರಿಂದ ಮಕ್ಕಳು ಪ್ರಾಥಮಿಕ‌ ಶಿಕ್ಷಣದಿಂದಲೇ ಮೌಢ್ಯ, ಕಂದಾಚಾರದಿಂದ ದೂರ ಉಳಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪಂಡಿತ್ ಜವಾಹರಲಾಲ್ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ “ರಾಜ್ಯ ಮಟ್ಟದ ಮಕ್ಕಳ ದಿನಾಚರಣೆ ಮತ್ತು ಪೋಷಕರ-ಶಿಕ್ಷಕರ ಮಹಾಸಭೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳೇ ಭಾರತದ ಭವಿಷ್ಯ ಎನ್ನುವ ದೂರದೃಷ್ಟಿ ನೆಹರೂ ಅವರಿಗೆ ಇತ್ತು. ಹೀಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ರೂಪಿಸುವ ಶಿಕ್ಷಣಕ್ಕೆ ಒತ್ತು ನೀಡಿದ್ದರು.

ನಮ್ಮ ಸರ್ಕಾರ ಕೂಡ ಶಿಕ್ಷಣಕ್ಕೆ ಪ್ರಥಮ ಆಧ್ಯತೆ ನೀಡಿದ್ದು, 65,000 ಕೋಟಿ ರೂಪಾಯಿಗಳನ್ನು ಶಿಕ್ಷಣಕ್ಕೆ ನೀಡುತ್ತಿದ್ದೇವೆ. ನೆಹರೂ ತಮ್ಮ ಯೌವ್ವನದ 3,200ಕ್ಕೂ ಹೆಚ್ಚು ದಿನಗಳನ್ನು ಜೈಲಿನಲ್ಲಿ ಕಳೆದ ಹೋರಾಟಗಾರ. ಅತೀ ಶ್ರೀಮಂತ ಕುಟುಂಬದಿಂದ ಬಂದಿದ್ದರೂ ದೇಶದ ಸ್ವಾತಂತ್ರ್ಯಕ್ಕಾಗಿ ಸೆರೆಮನೆ ಸೇರಿದರು. ದೇಶದ ಪ್ರಧಾನಿಯಾಗಿ ಕೃಷಿ, ವಿಜ್ಞಾನ, ನೀರಾವರಿ, ತಂತ್ರಜ್ಞಾನ ಸೇರಿ ದೇಶದ ಸಮಗ್ರ ಅಭಿವೃದ್ಧಿಗೆ ಅಡಿಪಾಯ ಹಾಕಿದರು.

ಐಐಟಿ, ಏಮ್ಸ್ ಸೇರಿ ಅಣೆಕಟ್ಟು, ಕೈಗಾರಿಕೆಗಳನ್ನೆಲ್ಲಾ ಮಾಡಿದ್ದು ನೆಹರೂ.‌ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಬ್ರಿಟಿಷರ ಜೊತೆ ಕೈಜೋಡಿಸಿದ್ದವರು ನೆಹರೂ ಮತ್ತು ಗಾಂಧಿಯನ್ನು ಟೀಕಿಸುತ್ತಾರೆ. ಇದನ್ನು ಮಕ್ಕಳಿಗೆ ಶಿಕ್ಷಕರು ಹಾಗೂ ಪೋಷಕರು ಅರ್ಥ ಮಾಡಿಸಬೇಕು. ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಇರುವ ಮಕ್ಕಳ ಮೇಲೆ ದೇಶದ ಅಭಿವೃದ್ಧಿ ಮತ್ತು ಭವಿಷ್ಯದ ಕನಸನ್ನು ನೆಹರೂ ಕಟ್ಟಿಕೊಂಡಿದ್ದರು.

ಪ್ರತಿಭೆ ಯಾರ ಸ್ವತ್ತೂ ಅಲ್ಲ. ಈಗ ಈ ವೇದಿಕೆಯಲ್ಲಿ ಸನ್ಮಾನಿತರಾದ ವಿದ್ಯಾರ್ಥಿಗಳೆಲ್ಲರೂ ಬಡ ಕುಟುಂಬದಿಂದ ಬಂದು ಸರ್ಕಾರಿ ಶಾಲೆಗಳಲ್ಲಿ ಓದಿದವರು. ಆದ್ದರಿಂದ ಈ ವರ್ಷ ಒಟ್ಟು 900 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯುತ್ತಿದ್ದೇವೆ. ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ. ನಾನೂ ಸರ್ಕಾರಿ ಶಾಲೆಯಲ್ಲಿ ಓದಿಯೇ ಮುಖ್ಯಮಂತ್ರಿ ಆಗಿದ್ದೀನಿ.

ಸರ್ಕಾರಿ ಶಾಲೆಗಳ ಮಕ್ಕಳು ಸ್ವಾಭಿಮಾನದಿಂದ ಸಮಾಜಮುಖಿಯಾಗಿ ಬೆಳೆಯಲು, ಉತ್ತಮ ಶಿಕ್ಷಣ ಪಡೆಯಲು ನಮ್ಮ ಸರ್ಕಾರ ಸಕಲ ಸವಲತ್ತುಗಳನ್ನೂ ನೀಡುತ್ತಿದೆ. ಇಂದಿರಾ ಕಿಟ್, ಶೂ, ಸಮವಸ್ತ್ರ, ಮೊಟ್ಟೆ, ಬಾಳೆಹಣ್ಣು, ಪಠ್ಯ ಪುಸ್ತಕ, ಸ್ಕಾಲರ್ಶಿಪ್ ಇವೆಲ್ಲವನ್ನೂ ಬಡವರ ಮಕ್ಕಳಿಗಾಗಿ ಸರ್ಕಾರ ಒದಗಿಸುತ್ತಿದೆ. ಇದರ ಅನುಕೂಲ ಪಡೆದು ಮಕ್ಕಳು ದೇಶದ ಆಸ್ತಿಯಾಗಿ ರೂಪುಗೊಳ್ಳಬೇಕು ಎಂದರು.

Previous articleಕಬ್ಬು ಬೆಳೆಗಾರರ ಹೋರಾಟ: ಸರ್ಕಾರದ ಎಡವಟ್ಟು – ಸಚಿವ ಪ್ರಹ್ಲಾದ ಜೋಶಿ ಗರಂ
Next articleಮೋದಿ-ಶಾ ರಣತಂತ್ರ: ಬಿಹಾರದಲ್ಲಿ ‘ಮಹಾಘಟಬಂಧನ್’ ಉಡೀಸ್ ಆದ ಹಿಂದಿನ ಮಾಸ್ಟರ್ ಪ್ಲ್ಯಾನ್!

LEAVE A REPLY

Please enter your comment!
Please enter your name here