Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಮೀಟರ್ ಹೆಚ್ಚಾದರೆ ಮೋದಿ – ದರ ಹೆಚ್ಚಾದರೆ ರಾಜ್ಯ ಕಾರಣ: ಇದು ಬಿಜೆಪಿ ಲಾಜಿಕ್

ಮೀಟರ್ ಹೆಚ್ಚಾದರೆ ಮೋದಿ – ದರ ಹೆಚ್ಚಾದರೆ ರಾಜ್ಯ ಕಾರಣ: ಇದು ಬಿಜೆಪಿ ಲಾಜಿಕ್

0
77

ಮೆಟ್ರೋ ದರ ಏರಿಕೆ ಹೊಣೆ ರಾಜ್ಯ ಸರ್ಕಾರದ ಮೇಲೇ ಹಾಕುವುದು ಬಿಜೆಪಿಯ ಲಾಜಿಕ್: ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬೆಂಗಳೂರು: “ಮೆಟ್ರೋ ಲೈನ್ ಒಂದು ಮೀಟರ್ ಹೆಚ್ಚಾದರೆ ಪ್ರಧಾನಿ ಮೋದಿ ಕಾರಣ, ಆದರೆ ಮೆಟ್ರೋ ಟಿಕೆಟ್ ದರ ಒಂದು ರೂಪಾಯಿ ಹೆಚ್ಚಾದರೆ ರಾಜ್ಯ ಸರ್ಕಾರ ಕಾರಣ ಎನ್ನುವುದು ಬಿಜೆಪಿಗರು ಬಳಸುವ ಲಾಜಿಕ್” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಮೆಟ್ರೋ ಯೋಜನೆ ಅನುಷ್ಠಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಹಣ ಹೂಡಿಕೆ ಮಾಡಬೇಕಾದ ನಿಯಮವಿದೆ. ಆದರೆ ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ಸಂಪೂರ್ಣವಾಗಿ ನೀಡದ ಕಾರಣ, ರಾಜ್ಯ ಸರ್ಕಾರವೇ ಸುಮಾರು 87% ಹಣವನ್ನು ಭರಿಸಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Metro ದರ ಏರಿಕೆಗೆ ತಾತ್ಕಾಲಿಕ ಬ್ರೇಕ್: ಬೆಂಗಳೂರಿಗರಿಗೆ ರಿಲೀಫ್‌

ಮೆಟ್ರೋ ಕ್ರೆಡಿಟ್‌ಗೆ ಮುಗಿಬೀಳುವ ಬಿಜೆಪಿ ನಾಯಕರು: ಮೆಟ್ರೋ ವಿಸ್ತರಣೆ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಬೇಕಾದ ನೆರವು ಸಮರ್ಪಕವಾಗಿ ಸಿಗದಿದ್ದರೂ, ಯೋಜನೆಯ ಕ್ರೆಡಿಟ್ ಪಡೆಯಲು ಬಿಜೆಪಿ ನಾಯಕರು ಮುಂದುಮುಂದು ಎಂದು ಮುನ್ನುಗ್ಗುತ್ತಾರೆ. ಆದರೆ ಟಿಕೆಟ್ ದರ ಏರಿಕೆಯ ವಿಚಾರ ಬಂದಾಗ ಮಾತ್ರ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುವ ಚಾಳಿ ಬೆಳೆಸಿಕೊಂಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ದರ ನಿಗದಿ ಕೇಂದ್ರದ ನಿಯಂತ್ರಣದಲ್ಲಿ – ಖರ್ಗೆ ಸ್ಪಷ್ಟನೆ: ಮೆಟ್ರೋ ದರ ನಿಗದಿಯ ಕುರಿತು ಸ್ಪಷ್ಟ ಮಾಹಿತಿ ನೀಡಿರುವ ಅವರು, ಮೆಟ್ರೋ ರೈಲ್ವೆ ಕಾಯ್ದೆ – 2002 ಪ್ರಕಾರ ಟಿಕೆಟ್ ದರ ನಿಗದಿಪಡಿಸುವುದು ಸ್ವತಂತ್ರವಾದ ಫೇರ್ ಫಿಕ್ಸೆಶನ್ ಕಮಿಟಿ (FFC) ಯ ಹೊಣೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು–ವಿಜಯಪುರ ವಂದೇ ಭಾರತ್, ಹೈಸ್ಪೀಡ್ ಕಾರಿಡಾರ್‌ಗೆ ಎಂ.ಬಿ. ಪಾಟೀಲ್ ಮನವಿ

ಅದರ ಪ್ರಮುಖ ಅಂಶಗಳು ಹೀಗಿವೆ: ಫೇರ್ ಫಿಕ್ಸೆಶನ್ ಕಮಿಟಿಯನ್ನು ರಚಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಸೇರಿದೆ. ದರ ಏರಿಕೆಯ ಪ್ರಸ್ತಾವನೆಯನ್ನು ಅಂತಿಮಗೊಳಿಸುವ ಅಧಿಕಾರವೂ ಕೇಂದ್ರ ಸರ್ಕಾರದ ಕೈಯಲ್ಲಿದೆ. ಈ ಸಮಿತಿ ವಾರ್ಷಿಕವಾಗಿ ದರ ನಿಗದಿಗಾಗಿ ನಿರ್ದಿಷ್ಟ ಫಾರ್ಮುಲಾ ಅನುಸರಿಸುತ್ತದೆ. ಸಮಿತಿಯ ಅಧ್ಯಕ್ಷರನ್ನು ಕೇಂದ್ರ ಸರ್ಕಾರವೇ ನೇಮಿಸುತ್ತದೆ.

ಸಮಿತಿಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳ ಸಂಖ್ಯೆ ಹೆಚ್ಚು ಇರುತ್ತದೆ. ಅವರ ಶಿಫಾರಸುಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ನಿಯಮದ ಪ್ರಕಾರ ‘ನಮ್ಮ ಮೆಟ್ರೋ’ ಸಂಸ್ಥೆ ಈ ಶಿಫಾರಸುಗಳನ್ನು ಒಪ್ಪಲೇಬೇಕು. ಇಂತಹ ಸಂದರ್ಭದಲ್ಲಿ ದರ ಏರಿಕೆಗೆ ರಾಜ್ಯ ಸರ್ಕಾರವನ್ನು ಹೊಣೆ ಮಾಡುವುದು ಸಂಪೂರ್ಣವಾಗಿ ತಪ್ಪು ಎಂದು ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: ‘ATM ಸರ್ಕಾರ’ದ ಭ್ರಷ್ಟರಿಗೆ ಕಾಂಗ್ರೆಸ್ ಹೈಕಮಾಂಡ್ ರಕ್ಷಣೆ: R ಅಶೋಕ್

ಬಿಜೆಪಿ ಸುಳ್ಳಿನ ರಾಜಕಾರಣ ಮಾಡುತ್ತಿದೆ : ಸಾರ್ವಜನಿಕ ಜೀವನದಲ್ಲಿರುವವರಿಗೆ ಈ ನಿಯಮಗಳ ಅರಿವು ಇರಬೇಕು. ಆದರೆ ಬಿಜೆಪಿ ನಾಯಕರಿಗೆ ಇದರ ಅರಿವು ಇಲ್ಲವೇ, ಅಥವಾ ಅರಿವಿದ್ದೂ ಜನರನ್ನು ತಪ್ಪು ದಾರಿಗೆಳೆಯಲು ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರವು 2024ರಲ್ಲಿ ಫೇರ್ ಫಿಕ್ಸೆಶನ್ ಕಮಿಟಿ ರಚನೆಗೆ ಮನವಿ ಮಾಡಿತ್ತು. ಆದರೆ ಈಗ ಹಿಂದಿನ ಪತ್ರಗಳನ್ನು ಹಿಡಿದು ಬಿಜೆಪಿ ನಾಯಕರು ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ಸತ್ಯದ ಹಾದಿ ಬಿಜೆಪಿಗೆ ಅಪಥ್ಯ, ಏಕೆಂದರೆ ಸುಳ್ಳೇ ಅವರ ಮನೆದೇವರು” ಎಂದು ಕಟುವಾಗಿ ಟೀಕಿಸಿದ್ದಾರೆ.

ಕೇಂದ್ರ ಸರ್ಕಾರದ ನಿರ್ಧಾರವೇ ಅಂತಿಮ: ಇತ್ತೀಚೆಗೆ ಮೆಟ್ರೋ ದರ ಏರಿಕೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂಬ ಸುದ್ದಿ ಬಂದಿರುವುದನ್ನು ಉಲ್ಲೇಖಿಸಿದ ಖರ್ಗೆ, “ದರ ಏರಿಕೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಒಳಪಟ್ಟಿರುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇರೆ ಏನು ಬೇಕು?” ಎಂದು ಪ್ರಶ್ನಿಸಿದ್ದಾರೆ.

ಈ ಹೇಳಿಕೆಯಿಂದಾಗಿ ಮೆಟ್ರೋ ದರ ಏರಿಕೆ ವಿಚಾರದಲ್ಲಿ ರಾಜ್ಯ–ಕೇಂದ್ರ ಸರ್ಕಾರಗಳ ನಡುವೆ ರಾಜಕೀಯ ಜಟಾಪಟಿ ಮತ್ತಷ್ಟು ತೀವ್ರಗೊಂಡಿದೆ.

Previous articleಬಾಲಕನ ನೃತ್ಯಕ್ಕೆ ‘ಮೋನಿಕಾ’ ಫಿದಾ: ವಿಡಿಯೋ ವೈರಲ್
Next articleಕಾಂಗ್ರೆಸ್‌ನಲ್ಲಿ ಭಿನ್ನಮತ ಇಲ್ಲ, ಹೈಕಮಾಂಡ್ ತೀರ್ಮಾನವೇ ಅಂತಿಮ