ಚಿಪ್ ಚಕಮಕಿ: ದೇಶದ ಭವಿಷ್ಯವನ್ನು ರೂಪಿಸಲಿರುವ ಸೆಮಿಕಂಡಕ್ಟರ್ ಉದ್ಯಮದ ಹೂಡಿಕೆಗಾಗಿ ರಾಜ್ಯಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಈ ವಿಚಾರವಾಗಿ ಕರ್ನಾಟಕ ಮತ್ತು ಅಸ್ಸಾಂ ನಡುವೆ ದೊಡ್ಡ ರಾಜಕೀಯ ಸಮರವೇ ಆರಂಭವಾಗಿದೆ.
ಕರ್ನಾಟಕಕ್ಕೆ ಬರಬೇಕಿದ್ದ ಹೂಡಿಕೆಗಳನ್ನು ಕೇಂದ್ರ ಸರ್ಕಾರವು ಅಸ್ಸಾಂ ಮತ್ತು ಗುಜರಾತ್‌ಗೆ ಉದ್ದೇಶಪೂರ್ವಕವಾಗಿ ವರ್ಗಾಯಿಸುತ್ತಿದೆ ಎಂಬ ಕರ್ನಾಟಕದ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪ, ಇದೀಗ ವೈಯಕ್ತಿಕ ನಿಂದನೆ ಮತ್ತು ರಾಜ್ಯಗಳ ಪ್ರತಿಷ್ಠೆಯ ಸಂಘರ್ಷವಾಗಿ ಮಾರ್ಪಟ್ಟಿದೆ.
ಈ ವಿವಾದದ ಕಿಡಿ ಹೊತ್ತಿದ್ದು ಪ್ರಿಯಾಂಕ್ ಖರ್ಗೆಯವರ ಒಂದು ಹೇಳಿಕೆಯಿಂದ. “ಸೆಮಿಕಂಡಕ್ಟರ್ ಚಿಪ್ ತಯಾರಿಕೆಯಂತಹ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಬೆಂಗಳೂರು ಅತ್ಯಂತ ಸೂಕ್ತ ತಾಣ. ಆದರೂ, ರಾಜಕೀಯ ಕಾರಣಗಳಿಗಾಗಿ ಈ ಯೋಜನೆಗಳನ್ನು ಅಸ್ಸಾಂನಂತಹ ರಾಜ್ಯಗಳಿಗೆ ಕೊಂಡೊಯ್ಯಲಾಗುತ್ತಿದೆ. ಅಂತಹ ಉನ್ನತ ತಂತ್ರಜ್ಞಾನ ನಿರ್ವಹಿಸುವ ಪ್ರತಿಭೆಗಳು ಅಲ್ಲಿವೆಯೇ?” ಎಂದು ಪ್ರಶ್ನಿಸಿದ್ದರು.
ಈ ಹೇಳಿಕೆಯು ಅಸ್ಸಾಂನ ಯುವ ಸಮುದಾಯದ ಸಾಮರ್ಥ್ಯಕ್ಕೆ ಮಾಡಿದ ಅವಮಾನ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಖರ್ಗೆಯವರನ್ನು “ಫಸ್ಟ್ ಕ್ಲಾಸ್ ಈಡಿಯಟ್” ಎಂದು ಕರೆದರು.
ಈ ಟೀಕೆಗೆ ಪ್ರಿಯಾಂಕ್ ಖರ್ಗೆ ‘ಎಕ್ಸ್’ ವೇದಿಕೆಯಲ್ಲಿ ಸುದೀರ್ಘವಾದ ಪ್ರಬಂಧದ ಮೂಲಕ ಉತ್ತರಿಸಿದ್ದರು. ಇದನ್ನು ಅಸ್ತ್ರವಾಗಿಸಿಕೊಂಡ ಅಸ್ಸಾಂ ಬಿಜೆಪಿ, “ಹಲೋ ಟೆಡ್ಡಿ ಬಾಯ್, ಎಕ್ಸ್‌ನಲ್ಲಿ ಪ್ರಬಂಧ ಬರೆದ ಮಾತ್ರಕ್ಕೆ ನೀವು ಸೆಮಿಕಂಡಕ್ಟರ್ ತಜ್ಞರಾಗಲು ಸಾಧ್ಯವಿಲ್ಲ,” ಎಂದು ವ್ಯಂಗ್ಯವಾಡಿತು.
ಅಷ್ಟೇ ಅಲ್ಲದೆ, “ಅಸ್ಸಾಂಗೆ ಉಪದೇಶ ಮಾಡುವ ಮೊದಲು, ದಕ್ಷಿಣ ಭಾರತದ ಬಡತನ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ನಿಮ್ಮ ಸ್ವಂತ ಜಿಲ್ಲೆಯಾದ ಕಲಬುರಗಿಯ ಅಭಿವೃದ್ಧಿಯತ್ತ ಗಮನಹರಿಸಿ,” ಎಂದು ಕುಟುಕಿದೆ.
ಈ ವೈಯಕ್ತಿಕ ದಾಳಿಗೆ ಪ್ರತ್ಯುತ್ತರ ನೀಡಿದ ಪ್ರಿಯಾಂಕ್ ಖರ್ಗೆ, ನೀತಿ ಆಯೋಗದ ವರದಿಯನ್ನು ಉಲ್ಲೇಖಿಸಿ, “ಒಂದು ದಶಕದ ಬಿಜೆಪಿ ಆಡಳಿತದ ಹೊರತಾಗಿಯೂ, ಅಸ್ಸಾಂ ರಾಜ್ಯವು ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಪ್ರಗತಿಯಂತಹ ಪ್ರಮುಖ ಅಭಿವೃದ್ಧಿ ಸೂಚ್ಯಂಕಗಳಲ್ಲಿ ದೇಶದ ಕೊನೆಯ ಐದು ರಾಜ್ಯಗಳಲ್ಲಿ ಒಂದಾಗಿದೆ,” ಎಂದು ತಿರುಗೇಟು ನೀಡಿದ್ದಾರೆ.
ಒಂದು ಕೈಗಾರಿಕಾ ಹೂಡಿಕೆಯ ಕುರಿತಾದ ಚರ್ಚೆಯು ಇದೀಗ ಎರಡು ರಾಜ್ಯಗಳ ಆಡಳಿತ ಮಾದರಿಗಳ ಹೋಲಿಕೆ ಮತ್ತು ನಾಯಕರ ನಡುವಿನ ವೈಯಕ್ತಿಕ ಘನತೆಯ ಸುತ್ತ ಗಿರಕಿ ಹೊಡೆಯುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.

























