ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ತಪ್ಪಿದ್ದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ವಾಹನ ಸವಾರರು ಭಾರೀ ದಟ್ಟಣೆಯಲ್ಲಿ ಸಿಲುಕುತ್ತಿದ್ದಾರೆ. ಅದಕ್ಕೆ ಕಾರಣ ಏನು? ಎಂಬುದು ಈಗ ಬಹಿರಂಗವಾಗಿದೆ.
ಉದ್ಯಾನ ನಗರಿ ಬೆಂಗಳೂರು ತನ್ನ ಆಹ್ಲಾದಕರ ಹವಾಮಾನಕ್ಕೆ ಹೆಸರುವಾಸಿ. ಈಗ ಸಿಲಿಕಾನ್ ಸಿಟಿ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ರಸ್ತೆಗಳಲ್ಲಿನ ದೊಡ್ಡ ದೊಡ್ಡ ಗುಂಡಿಗಳು.
ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಈ ಗುಂಡಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ನಗರದಲ್ಲಿ ಸಂಚಾರ ವ್ಯವಸ್ಥೆ ನಿಧಾನವಾಗುತ್ತಿದೆ ಎಂದು ವಾಹನ ಸವಾರರು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಮಳೆ, ರಸ್ತೆಗುಂಡಿ.
ಪ್ರತಿ ಮಳೆಗಾಲದಲ್ಲಿ ಬೆಂಗಳೂರಿನ ರಸ್ತೆಗಳು ಕೆರೆಯಂತೆ ಕಾಣುತ್ತವೆ. ಸಣ್ಣ ಹೊಂಡಗಳು ದೊಡ್ಡ ಗುಂಡಿಗಳಾಗುತ್ತವೆ. ರಸ್ತೆ ಮಳೆ ನೀರು ಮತ್ತು ಕೆಸರಿನಿಂದ ತುಂಬಿ ಹೋಗುತ್ತವೆ.
ಈ ಪರಿಸ್ಥಿತಿ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ನರಕದ ಅನುಭವ ನೀಡುತ್ತದೆ ಎಂಬುವದರಲ್ಲಿ ಎರಡು ಮಾತಿಲ್ಲ. ಸದ್ಯ ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿ ಅಲ್ಲಲ್ಲಿ ಇರುವ ಗುಂಡಿಗಳು ಪ್ರಯಾಣವನ್ನು ಮತ್ತಷ್ಟು ನಿಧಾನ ಮಾಡುತ್ತಿವೆ.
ನಿರಂತರ ಮಳೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.
ಈ ರಸ್ಗಳುತೆ ಪ್ರಯಾಣಿಕರಿಗೆ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ಕಿರಿಕಿರಿ ಮಾಡುತ್ತಿದೆ. ಬೆಂಗಳೂರು ಸಂಚಾರಿ ಪೊಲೀಸರು ನಗರದಾದ್ಯಂತ ಗುರುತಿಸಿರುವ ಹಲವು ರಸ್ತೆಗಳು ಗುಂಡಿಗಳಿಂದಾಗಿ ಹಾಳಾಗಿವೆ. ಸಂಚಾರ ತಜ್ಞರು ಕನಿಷ್ಠ 15 ಪ್ರಮುಖ ಸ್ಥಳಗಳಲ್ಲಿ ರಸ್ತೆಗಳು ಹದಗೆಟ್ಟಿರುವುದರಿಂದಲೇ ಸಂಚಾರ ದಟ್ಟಣೆ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
ಮೈಸೂರು ರಸ್ತೆ, ಬನ್ನೇರುಘಟ್ಟ ಮುಖ್ಯ ರಸ್ತೆ, ಪಣತ್ತೂರು ಮುಖ್ಯ ರಸ್ತೆ, ಎಚ್‌ಎಂಟಿ ಮುಖ್ಯ ರಸ್ತೆ, ಟ್ಯಾನರಿ ರಸ್ತೆ, ಮಹದೇವಪುರ–ಚನ್ನಸಂದ್ರ (ವೈಟ್‌ಫೀಲ್ಡ್) ರಸ್ತೆಗಳು ಈ ಪಟ್ಟಿಯಲ್ಲಿ ಸೇರಿವೆ.
ದಕ್ಷಿಣ ಬೆಂಗಳೂರಿನಲ್ಲಿ ಅರಕೆರೆಯಿಂದ ಕೋಲಿ ಫಾರ್ಮ್ ಗೇಟ್‌ವರೆಗಿನ ಬನ್ನೇರುಘಟ್ಟ ರಸ್ತೆಯು ತನ್ನ ಗುಂಡಿಗಳಿಗೆ ಕುಖ್ಯಾತವಾಗಿದೆ. ಈ ಗುಂಡಿಗಳು ಸಂಚಾರ ದಟ್ಟಣೆಗೆ ಕಾರಣವಾಗಿವೆ. ಅಪಘಾತಗಳು ಇಲ್ಲಿ ಸಾಮಾನ್ಯವಾಗಿವೆ.
ಈ ಸಮಸ್ಯೆಯನ್ನು ನಿಭಾಯಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಯತ್ನಿಸುತ್ತಿದೆ. ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದಂತೆ, ಬೆಂಗಳೂರು ಸಂಚಾರ ಪೊಲೀಸರು ಗುರುತಿಸಿದ ಎಲ್ಲಾ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ.