ಬೆಂಗಳೂರು-ಹಾಸನ ನಡುವಿನ ರಾಷ್ಟ್ರೀಯ ಹೆದ್ದಾರಿಯ ಟೋಲ್ ಶುಲ್ಕವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪರಿಷ್ಕರಣೆ ಮಾಡಿದೆ. ಪರಿಷ್ಕರಣೆಗೊಂಡ ಶುಲ್ಕ ಸೆಪ್ಟೆಂಬರ್ 1ರ ಸೋಮವಾರದಿಂದ ಜಾರಿಗೆ ಬಂದಿದೆ.
ನೆಲಮಂಗಲ-ಹಾಸನ ನಡುವೆ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಸಂಚಾರ ನಡೆಸುವ ವಾಹನ ಸವಾರರು ಹೆಚ್ಚುವರಿ ಟೋಲ್ ಶುಲ್ಕವನ್ನು ಪಾವತಿ ಮಾಡಬೇಕು. ಈ ಕುರಿತು ಎನ್ಎಚ್‌ಎಐ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ಪ್ರೈವೇಟ್ ಲಿಮಿಟೆಡ್ ಟೋಲ್ ದರಗಳನ್ನು ಏರಿಕೆ ಮಾಡಿದೆ. ಟೋಲ್ ಶುಲ್ಕ 5 ರೂ. ಏರಿಕೆಯಾಗಿದ್ದು, ವಾಹನ ಸವಾರರು ಸಂಚಾರಕ್ಕೂ ಮುನ್ನ ಫಾಸ್ಟ್ ಟ್ಯಾಗ್‌ನಲ್ಲಿ ಎಷ್ಟು ಹಣವಿದೆ? ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ.
ಬೆಂಗಳೂರು-ಹಾಸನ ಮಾರ್ಗದಲ್ಲಿ ಬರುವ ದೊಡ್ಡಕರೇನಹಳ್ಳಿ ಮತ್ತು ಕಾರಬೈಲ್ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಏರಿಕೆಯಾಗಿದೆ. ವಾಹನಗಳ ಏಕಮುಖ ಸಂಚಾರಕ್ಕೆ 5 ರೂ. ಮತ್ತು ದ್ವಿಮುಖ ಸಂಚಾರಕ್ಕೆ 10 ರೂ. ಶುಲ್ಕವನ್ನು ಏರಿಕೆ ಮಾಡಲಾಗಿದೆ.
ಕಾರು, ಜೀಪು, ವ್ಯಾನ್ ಮತ್ತು ಲಘು ವಾಹನಗಳ ಶುಲ್ಕ ಏರಿಕೆಯಾಗಿಲ್ಲ. ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳು ಏಕಮುಖ ಸಂಚಾರಕ್ಕೆ 55 ರೂ., 60 ದಿನದ ಸಂಚಾರಕ್ಕೆ 85 ರೂ. ಇರಲಿದೆ. ಆದರೆ ಫಾಸ್ಟ್‌ಟ್ಯಾಗ್ ಇಲ್ಲವಾದಲ್ಲಿ 110 ರೂ. ಇದ್ದ ದರ 120 ರೂ. ಆಗಿದೆ.
ಸರಕು ಸಾಗಣೆ ಮಾಡುವ ಲಘು ವಾಣಿಜ್ಯ ವಾಹನಗಳ ಪ್ರತಿದಿನದ ಸಂಚಾರ ಶುಲ್ಕವನ್ನು 100 ರಿಂದ 155 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಟೋಲ್ ಶುಲ್ಕ ಏರಿಕೆ ಕುರಿತು ಜನರು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.