Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಖಾಸಗಿ ಬಸ್‌ಗೆ ಬೆಂಕಿ: 40 ಪ್ರಯಾಣಿಕರು ಅಪಾಯದಿಂದ ಪಾರು

ಖಾಸಗಿ ಬಸ್‌ಗೆ ಬೆಂಕಿ: 40 ಪ್ರಯಾಣಿಕರು ಅಪಾಯದಿಂದ ಪಾರು

0
105

ನೆಲಮಂಗಲ, ಬೆಂಗಳೂರು: ಚಿತ್ರದುರ್ಗ ಸಮೀಪ ನಡೆದ ಖಾಸಗಿ ಬಸ್‌ ಬೆಂಕಿ ದುರಂತದ ನೆನಪು ಇನ್ನೂ ಮಾಸುವ ಮುನ್ನವೇ, ರಾಜ್ಯದಲ್ಲಿ ಮತ್ತೊಂದು ಭಾರೀ ಅವಘಡ ಸಂಭವಿಸಿದೆ. ಬೆಂಗಳೂರಿನ ಹೊರವಲಯದ ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಜನಾ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್‌ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ.

ಶುಕ್ರವಾರ ಬೆಳಗಿನ ಜಾವ ತುಮಕೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ನಿಧಾನವಾಗಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಕ್ಷಣಾರ್ಧದಲ್ಲೇ ಬಸ್‌ಗೆ ಬೆಂಕಿ ಹತ್ತಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಬಸ್ ಹೊತ್ತಿ ಉರಿದಿದೆ.

ಇದನ್ನೂ ಓದಿ: ತಾಜ್ಯ ವಿಲೇವಾರಿ ಘಟಕದಲ್ಲಿ ಶುಕ್ರವಾರ ನಸುಕಿನ ಜಾವ ಭಾರಿ ಅಗ್ನಿ ಅವಘಡ 

ಘಟನೆ ಸಮಯದಲ್ಲಿ ಬಸ್‌ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಪ್ರಯಾಣಿಕರು ಎಚ್ಚರಿಕೆಯಿಂದ ವಾಹನದಿಂದ ಇಳಿದು ಹೊರಬಂದ ಪರಿಣಾಮ, ದೊಡ್ಡ ದುರಂತ ತಪ್ಪಿದಂತಾಗಿದೆ. ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ನೆಲಮಂಗಲ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬಳಿಕ ಸಂಚಾರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಇದನ್ನೂ ಓದಿ: ಮಾಲೂರು ಕ್ಷೇತ್ರ ಮರು ಮತ ಎಣಿಕೆಯಲ್ಲಿ ನಂಜೇಗೌಡ ಗೆಲುವು ದೃಢ

ಪ್ರಾಥಮಿಕ ತನಿಖೆಯ ಪ್ರಕಾರ, ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆ ಇಳಕು ಇದ್ದುದರಿಂದ ಬಸ್ ನಿಧಾನವಾಗಿ ಸಾಗುತ್ತಿತ್ತು. ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ವಿದ್ಯುತ್ ಸಂಪರ್ಕದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಬಸ್‌ಗಳಿಗೆ ಸಂಬಂಧಿಸಿದ ಬೆಂಕಿ ಅವಘಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷತೆ ಕುರಿತು ಗಂಭೀರ ಚರ್ಚೆ ಆರಂಭವಾಗಿದೆ. ವಾಹನಗಳ ತಾಂತ್ರಿಕ ತಪಾಸಣೆ, ಚಾಲಕರ ಎಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Previous articleಕಾರವಾರ: ಡಂಪಿಂಗ್ ಯಾರ್ಡ್‌ನಲ್ಲಿ ಭಾರಿ ಬೆಂಕಿ
Next articleಸತೀಶ್ ಸೈಲ್‌ಗೆ ಲಿವರ್ ಕಸಿಗಾಗಿ ವೈದ್ಯಕೀಯ ಜಾಮೀನು ಮಂಜೂರು