ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ನಡೆಸುವ ಜನರಿಗೆ ಸಂತಸದ ಸುದ್ದಿ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದಲ್ಲಿ 4ನೇ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು. ಆಗಸ್ಟ್ 11ರಿಂದ 19 ಕಿ.ಮೀ. ಮಾರ್ಗದಲ್ಲಿ 3 ರೈಲುಗಳು ಸಂಚಾರ ನಡೆಸುತ್ತಿವೆ.
ಈಗ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿಸುದ್ದಿ ನೀಡಿದೆ. ಸೆಪ್ಟೆಂಬರ್ 10ರಂದು ಹಳದಿ ಮಾರ್ಗದಲ್ಲಿ 4ನೇ ರೈಲು ಸೇವೆಗೆ ಮುಕ್ತವಾಗುವ ಸಾಧ್ಯತೆ ಇದೆ. ಮುಖ್ಯ ಪರೀಕ್ಷೆಗಳು ಪೂರ್ಣಗೊಂಡ ನಂತರ ಈ ರೈಲುಗಳನ್ನು ನಿಯೋಜಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ. ಇನ್ನು ಸೆಪ್ಟೆಂಬರ್ 19ರೊಳಗೆ 5ನೇ ರೈಲು ಮತ್ತು ಅಕ್ಟೋಬರ್ ಕೊನೆಯ ವಾರದಲ್ಲಿ 6ನೇ ರೈಲು ಸಹ ಸೇವೆಗೆ ಸೇರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ, ಯೆಲ್ಲೋ ಲೈನ್ ಇಂಟರ್ಚೇಂಜ್ ಪ್ರಯಾಣಿಕರು ಸೇರಿದಂತೆ ಪ್ರತಿದಿನ ಸುಮಾರು 50,000ಕ್ಕೂ ಅಧಿಕ ಪ್ರಯಾಣಿಕರು ಹಳದಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾರೆ.
4ನೇ ರೈಲಿನ ಸೇರ್ಪಡೆಯು ಆವರ್ತನವನ್ನು ಇನ್ನಷ್ಟು ಸುಧಾರಿಸಿ, ಜನರಿಗೆ ಮತ್ತಷ್ಟು ಅನುಕೂಲ ಕಲ್ಪಿಸುತ್ತದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಪಿಆರ್‌ಒ ಬಿಎಲ್ ಯಶ್ವಂತ್ ಚವಾಣ್ ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸೆಪ್ಟೆಂಬರ್ 1ರಂದು ಹಳದಿ ಮಾರ್ಗದಲ್ಲಿ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಚೀನಾದಿಂದ 2 ರೈಲು ಸೆಟ್‌ಗಳನ್ನು ವಿಮಾನದಲ್ಲಿ ಸಾಗಣೆ ಮಾಡಬೇಕು ಎಂದು ಒತ್ತಾಯಿಸಿದ್ದರು.
2019ರಲ್ಲಿ ಚೀನಾ ಮೂಲದ ಕಂಪನಿಯು 173 ವಾರಗಳಲ್ಲಿ 216 ಬೋಗಿಗಳನ್ನು ಪೂರೈಸುವ ಟೆಂಡರ್ ಪಡೆದುಕೊಂಡಿತ್ತು. ಇವುಗಳಲ್ಲಿ 126 ಬೋಗಿಗಳು ನೇರಳೆ ಮತ್ತು ಹಸಿರು ಮಾರ್ಗಕ್ಕೆ 90 ಬೋಗಿಗಳು ಎಂದು ಬಿಎಂಆರ್‌ಸಿಎಲ್ ಲೆಕ್ಕಾಚಾರ ಹಾಕಿದೆ. ಸ್ಥಳೀಯ ಉತ್ಪಾದನಾ ಮಾನದಂಡಗಳಿಗೆ ಅನುಸಾರವಾಗಿ ಭಾರತದಲ್ಲಿ ರೈಲು ತಯಾರು ಮಾಡಲು ಪಶ್ಚಿಮ ಬಂಗಾಳದ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ರೈಲು ವೇಳಾಪಟ್ಟಿ: ಪ್ರಸ್ತುತ ಹಳದಿ ಮಾರ್ಗದಲ್ಲಿ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಮೂರು ರೈಲು ಓಡಾಟ ನಡೆಸುತ್ತಿದೆ. ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 11ರ ತನಕ ರೈಲುಗಳು ಸಂಚಾರ ನಡೆಸುತ್ತಿವೆ. ಮೂರು ರೈಲುಗಳು ಇರುವ ಕಾರಣ ರೈಲುಗಳ ನಡುವಿನ ಅವಧಿ 25 ನಿಮಿಷಗಳು.
ಹಳದಿ ಮಾರ್ಗದ ನಿಲ್ದಾಣಗಳು
ರಾಷ್ಟ್ರೀಯ ವಿದ್ಯಾಲಯ ರೋಡ್
ರಾಗಿಗುಡ್ಡ
ಜಯದೇವ ಆಸ್ಪತ್ರೆ
ಬಿಟಿಎಂ ಲೇಔಟ್
ಸೆಂಟ್ರಲ್ ಸಿಲ್ಕ್ ಬೋರ್ಡ್
ಬೊಮ್ಮನಹಳ್ಳಿ
ಹೊಂಗಸಂದ್ರ
ಕುಡ್ಲು ಗೇಟ್
ಸಿಂಗಸಂದ್ರ
ಹೊಸ ರೋಡ್
ಬೆರಟೇನ ಅಗ್ರಹಾರ
ಎಲೆಕ್ಟ್ರಾನಿಕ್ ಸಿಟಿ
ಇನ್ಫೋಸಿಸ್ ಫೌಂಡೇಶನ್ ಕೊನಪ್ಪನ ಅಗ್ರಹಾರ
ಹುಸ್ಕೂರ್ ರೋಡ್
ಬಯೋಕಾನ್ ಹೆಬ್ಬಗೋಡಿ
ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ