ಬೆಂಗಳೂರು: ದೇವನಹಳ್ಳಿ ಬಳಿ 772 ಎಕರೆಯಲ್ಲಿ ಕೆಎಚ್‌ಬಿ ಲೇಔಟ್

0
24

ಬೆಂಗಳೂರು ನಗರದಲ್ಲಿ ಮನೆ ಕೊಳ್ಳಬೇಕು, ಸೈಟು ಖರೀದಿ ಮಾಡಬೇಕು ಎನ್ನುವ ಆಲೋಚನೆ ಹೊಂದಿರುವ ಜನರಿಗೆ ಸುದ್ದಿಯೊಂದಿದೆ. ಬೆಂಗಳೂರಿನಲ್ಲಿ ವೇಗವಾಗಿ ಹೆಚ್ಚುತ್ತಿರುವ ನಗರೀಕರಣ ಹಾಗೂ ಕೈಗಾರಿಕಾ ಬೆಳವಣಿಗೆಯಿಂದ ವಸತಿ ಬೇಡಿಕೆ ಹೆಚ್ಚುತ್ತಿದ್ದು, ಇದನ್ನು ಪೂರೈಸಲು ಕರ್ನಾಟಕ ಗೃಹ ಮಂಡಳಿ (ಕೆಹೆಚ್‌ಬಿ) ದೇವನಹಳ್ಳಿ ಬಳಿಯ ಮಾಹಿತಿ ತಂತ್ರಜ್ಞಾನ ಹೂಡಿಕೆ ಪ್ರದೇಶ ಸಮೀಪ 772 ಎಕರೆ ವಸತಿ ಯೋಜನೆ ಪ್ರಸ್ತಾಪಿಸಿದೆ.

ಆರ್ಥಿಕವಾಗಿ ದುರ್ಬಲ ಇದ್ದವರಿಗೆ ಎಲ್ಲ ಮೂಲ ಸೌಕರ್ಯದೊಂದಿಗೆ ಕೈಗೆಟಕುವ ದರದಲ್ಲಿ ನಿವೇಶನ ಒದಗಿಸಲಾಗುವುದು ಎಂದು ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿದೆ. ಈ ಹಿಂದೆ ಯೋಜನೆ ಸಲುವಾಗಿ 1,777 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾದಾಗ ಆ ಭಾಗದ ರೈತರು ತೀವ್ರ ಪ್ರತಿಭಟನೆ ನಡೆಸಿದ್ದರು. ಯಾವುದೇ ಕಾರಣಕ್ಕೆ ಭೂಮಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಕ್ಕೆ ಬಂದು ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟಿತ್ತು.

ಇದೀಗ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ 5 ಗ್ರಾಮಗಳಾದ ವಿಶ್ವನಾಥಪುರ, ವಜರಹಳ್ಳಿ, ಬೀರೆಸಂದ್ರ, ಶಾನಪ್ಪನಹಳ್ಳಿ ಮತ್ತು ಮಾಣಿಗೊಂಡನಹಳ್ಳಿ ಪ್ರದೇಶದ 772 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಈ ಪೈಕಿ ವಿಶ್ವನಾಥಪುರದಲ್ಲಿ 410 ಎಕರೆ 13 ಗುಂಟೆ, ವಜರಹಳ್ಳಿಯಲ್ಲಿ 42 ಎಕರೆ 20 ಗುಂಟೆ, ಬೀರೆಸಂದ್ರದಲ್ಲಿ 59 ಎಕರೆ 22 ಗುಂಟೆ, ಶಾನಪ್ಪನಹಳ್ಳಿಯಲ್ಲಿ 83 ಎಕರೆ 23 ಗುಂಟೆ ಮತ್ತು ಮಾಣಿಗೊಂಡನಹಳ್ಳಿಯಲ್ಲಿ 177 ಎಕರೆ 12 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೆಹೆಚ್‌ಬಿ ಉದ್ದೇಶಿಸಿದೆ. ಭೂಸ್ವಾಧೀನದ ಕುರಿತು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಈ ಐದೂ ಗ್ರಾಮಗಳು ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರವನ್ನು ಸಂಪರ್ಕಿಸುವ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯಲ್ಲಿವೆ. ಇದು ಐಟಿಐಆರ್‌ಗೆ ಹೊಂದಿಕೊಂಡಿದ್ದು, ಅಲ್ಲಿ ಅಂತಾರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಕಂಪನಿಯೊಂದು 300 ಎಕರೆ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಈಗಾಗಲೇ ಐಟಿಐಆರ್‌ಗಾಗಿ 2,000 ಎಕರೆಗೂ ಹೆಚ್ಚು ಪ್ರದೇಶವನ್ನು ಅಭಿವೃದ್ಧಿಪಡಿಸಿದ್ದು, ಹತ್ತಿರದ ಒಬದೇನಹಳ್ಳಿ ಕೈಗಾರಿಕಾ ಪ್ರದೇಶವನ್ನು ವಿಸ್ತರಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮಾಲೀಕರಿಗೆ ಜಮೀನಿನಲ್ಲಿ ಶೇ 5೦ ಭಾಗ: ಸಾರ್ವಜನಿಕರ ಒಪ್ಪಿಗೆ ಪಡೆದ ನಂತರವೇ ಯೋಜನೆ ಮುಂದುವರಿಯಲಿದೆ. ನಾವು 50-50 ಸೂತ್ರದ ಆಧಾರದ ಮೇಲೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತೇವೆ. ಭೂಮಾಲೀಕರಿಗೆ ಹಣದ ಪರಿಹಾರದ ಬದಲಾಗಿ ಅಭಿವೃದ್ಧಿಪಡಿಸಿದ ಜಮೀನಿನಲ್ಲಿ ಶೇ 50ರಷ್ಟು ಭಾಗ ನೀಡಲಾಗುವುದು ಎಂದು ದಯಾನಂದ ಕೆ.ಎ .ಆಯುಕ್ತರು, ಕೆಹೆಚ್‌ಬಿ ಹೇಳಿದ್ದಾರೆ.

ಈ ಪ್ರದೇಶದಲ್ಲಿ ವಸತಿ ನಿವೇಶನಗಳ ಬೇಡಿಕೆ ವಿಪರೀತವಾಗಿ ಹೆಚ್ಚಿದೆ ಮತ್ತು ಹಲವು ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯಗಳು ಐಟಿಐಆರ್‌ ಸಮೀಪ ತಮ್ಮ ಕ್ಯಾಂಪಸ್‌ಗಳನ್ನು ನಿರ್ಮಿಸಿವೆ. ಅಂತಾರಾಷ್ಟ್ರೀಯ ಉತ್ಪಾದನಾ ಘಟಕ ಆರಂಭಗೊಳ್ಳುವ ಮೊದಲು ಒಂದು ಚದರ ಅಡಿಗೆ ರೂ.1,500 ಇದ್ದ ನಿವೇಶನಗಳ ಬೆಲೆ, ಈಗ 6,000 ರೂ.ಗೆ ಏರಿದೆ ಎಂದು ಮಾಹಿತಿ ನೀಡಿದರು. ಕೆಹೆಚ್‌ಬಿ ಯೋಜನೆಯಿಂದ ಬಡ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಮನೆಗಳು ಸಿಗಬಹುದು. ಆದರೆ, ಇದು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುವ ರೈತರಿಗೆ ನೋವುಂಟು ಮಾಡುತ್ತದೆ.

Previous articleಬೆಂಗಳೂರು: ಜಕ್ಕೂರು ಏರೋಡ್ರೋಂ ವಿಸ್ತರಣೆ, ಏನಿದು ಯೋಜನೆ?
Next articleಧರ್ಮಸ್ಥಳ ಪ್ರಕರಣ: ಎನ್‌ಐಎ ತನಿಖೆಗೆ ಆಗ್ರಹಿಸಿ ಅಮಿತ್ ಶಾ ಭೇಟಿಯಾದ ಸ್ವಾಮೀಜಿಗಳ ನಿಯೋಗ

LEAVE A REPLY

Please enter your comment!
Please enter your name here