ಬೆಂಗಳೂರು: ಕನ್ನಡ ಸಾಹಿತ್ಯದ ಮೆರುಗು ತಂದ ಮಹನೀಯರು ಹಳ್ಳಿಗಳಲ್ಲಿ ಹುಟ್ಟಿ ಬೆಳೆದವರು. ಅವರ ಜೀವನ, ಸಾಧನೆ ಮತ್ತು ಸಾಹಿತ್ಯದ ಮೂಲವೆಂದರೆ ಹಳ್ಳಿಗಳು. ಹೀಗಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಹುಟ್ಟೂರನ್ನು ಅಭಿವೃದ್ಧಿಪಡಿಸುವ ಮೂಲಕ ಅವರಿಗೆ ವಿಶಿಷ್ಟ ಗೌರವ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಹುಟ್ಟೂರಿಗೆ ತಲಾ ₹1 ಕೋಟಿ ಅನುದಾನ ನೀಡಲಾಗುತ್ತದೆ. ಅವರ ಹುಟ್ಟೂರುಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅವರ ಸಾಧನೆ ಮತ್ತು ಕೀರ್ತಿಯನ್ನು ಚಿರಸ್ಥಾಯಿಯಾಗಿ ಉಳಿಸುವುದು ನಮ್ಮ ಉದ್ದೇಶ” ಎಂದು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಈಗಾಗಲೇ ಈ ಕುರಿತು ವಿಶಿಷ್ಟ ಕಾರ್ಯಕ್ರಮ ರೂಪಿಸುವ ಚಿಂತನೆ ನಡೆಸುತ್ತಿದೆ. ಮಹನೀಯರು ಹುಟ್ಟಿದ ಸ್ಥಳ, ಅವರು ಬೆಳೆದ ಪರಿಸರ ಹಾಗೂ ಅವರ ಹೆಜ್ಜೆಗುರುತುಗಳಿರುವ ಪ್ರದೇಶಗಳನ್ನು ಗುರುತಿಸಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ.
ಪ್ರಿಯಾಂಕ್ ಖರ್ಗೆ ಅವರು ಘೋಷಿಸಿದ ಪುರಸ್ಕೃತರು ಮತ್ತು ಸ್ಥಳಗಳು : ಕುವೆಂಪು – ಶಿವಮೊಗ್ಗ ಜಿಲ್ಲೆಯ ಕುವೆಂಪುನಗರ. ದ.ರಾ. ಬೇಂದ್ರೆ – ಧಾರವಾಡ. ಶಿವರಾಮ ಕಾರಂತ – ಸಾಲಿಗ್ರಾಮ, ಉಡುಪಿ ಜಿಲ್ಲೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ – ಹೊಂಗೆನಹಳ್ಳಿ, ಮಾಲೂರು, ಕೋಲಾರ. ವಿ. ಕೃ. ಗೋಕಾಕ – ಸವಣೂರು, ಹಾವೇರಿ ಜಿಲ್ಲೆ. ಯು.ಆರ್. ಅನಂತಮೂರ್ತಿ – ತೀರ್ಥಹಳ್ಳಿ ತಾಲೂಕು. ಗಿರೀಶ್ ಕಾರ್ನಾಡ್ –. ಚಂದ್ರಶೇಖರ ಕಂಬಾರ – ಘೋಡಗೇರಿ ಗ್ರಾಮ, ಹುಕ್ಕೇರಿ ತಾಲೂಕ, ಬೆಳಗಾವಿ ಜಿಲ್ಲೆ.
ಜೊತೆಗೆ ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಭೀಮಸೇನ ಜೋಶಿ ಅವರ ಹುಟ್ಟೂರಿಗೂ ಅನುದಾನ ನೀಡಲಾಗುತ್ತದೆ ಎಂದಿದ್ದಾರೆ.

























