ಎವರೆಸ್ಟ್ ಅಭಿಯಾನಕ್ಕೆ ಸಜ್ಜಾದ ಕರ್ನಾಟಕ ಪರ್ವತಾರೋಹಿಗಳು: ಸಿಎಂ ಸಿದ್ದರಾಮಯ್ಯರಿಂದ ಧ್ವಜ ಹಸ್ತಾಂತರ
ಬೆಂಗಳೂರು: ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ವಿಶ್ವದ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ಏರಲು ಸಜ್ಜಾಗಿರುವ ಕರ್ನಾಟಕದ ಪರ್ವತಾರೋಹಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ.
ಕರ್ನಾಟಕ ಪರ್ವತಾರೋಹಣ ಸಂಘದ ಸದಸ್ಯರಾದ ಸಂತೋಷ್ ದೇವರಾಜಪ್ಪ ಹಾಗೂ ಮಹಿಳಾ ಪರ್ವತಾರೋಹಕಿ ಪ್ರೊ. ಡಾ. ಚಿನ್ಮಯಿ ತ್ರಿಶೂಲಮೂರ್ತಿ ಅವರು ಇಂದು ಬೆಂಗಳೂರಿನ ವಿಧಾನ ಸೌದದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪರ್ವತಾರೋಹಣ ತಂಡಕ್ಕೆ ರಾಷ್ಟ್ರೀಯ ತ್ರಿವರ್ಣ ಧ್ವಜ, ಕರ್ನಾಟಕ ರಾಜ್ಯ ಲಾಂಛನ ಹಾಗೂ ಕನ್ನಡ ಧ್ವಜ ಹಸ್ತಾಂತರಿಸಿ ಅವರ ಸಾಹಸಯಾತ್ರೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಏಪ್ರಿಲ್–ಮೇನಲ್ಲಿ ಎವರೆಸ್ಟ್ ಅಭಿಯಾನ : ಕರ್ನಾಟಕ ಪರ್ವತಾರೋಹಣ ಸಂಘದ ಈ ತಂಡವು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎವರೆಸ್ಟ್ ಶಿಖರಾರೋಹಣಕ್ಕೆ ಸಜ್ಜಾಗುತ್ತಿದೆ. ವಿಶ್ವದ ಅತಿ ಎತ್ತರದ ಪರ್ವತವಾದ ಎವರೆಸ್ಟ್ ಏರುವುದು ಪರ್ವತಾರೋಹಕರಿಗೆ ದೊಡ್ಡ ಸವಾಲಾಗಿದ್ದು, ಉತ್ತಮ ತರಬೇತಿ, ದೈಹಿಕ ಸಾಮರ್ಥ್ಯ ಮತ್ತು ಮನೋಬಲ ಅಗತ್ಯವಿರುತ್ತದೆ.
ತಂಡದ ಸದಸ್ಯರಾದ ಸಂತೋಷ್ ದೇವರಾಜಪ್ಪ ಮತ್ತು ಪ್ರೊ. ಡಾ. ಚಿನ್ಮಯಿ ತ್ರಿಶೂಲಮೂರ್ತಿ ಹಲವು ವರ್ಷಗಳಿಂದ ಪರ್ವತಾರೋಹಣದಲ್ಲಿ ತೊಡಗಿಸಿಕೊಂಡಿದ್ದು, ಈ ಬಾರಿ ಎವರೆಸ್ಟ್ ಶಿಖರಾರೋಹಣದ ಮೂಲಕ ಕರ್ನಾಟಕಕ್ಕೆ ಕೀರ್ತಿ ತರಲು ಸಜ್ಜಾಗಿದ್ದಾರೆ.
ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಕರ್ನಾಟಕ ಪರ್ವತಾರೋಹಣ ಸಂಘದ ಕಾರ್ಯದರ್ಶಿ ನಾಗೇಂದ್ರ ಕುಮಾರ್.ಆರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳು ತಂಡದ ಸದಸ್ಯರಿಗೆ ಶುಭ ಹಾರೈಸಿ, ಕರ್ನಾಟಕದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯುವಂತೆ ತಮ್ಮ ಸಾಹಸಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿ ಎಂದು ಆಶಿಸಿದರು.























