ಉತ್ತರಾದಿಮಠ, ರಾಯರ ಮಠದ ದಶಕಗಳ ವ್ಯಾಜ್ಯಕ್ಕೆ ಇತಿಶ್ರೀ

0
1

ಬೆಂಗಳೂರು: ಅನೇಕ ದಶಕಗಳಿಂದ ಆನೆಗೊಂದಿಯಲ್ಲಿನ ನವವೃಂದಾವನದ ಯತಿಗಳ ಪೂಜೆಯ ಸಂಬಂಧ ಉತ್ತರಾದಿಮಠ ಹಾಗೂ ರಾಯರಮಠದ ಮಧ್ಯೆ ತಲೆದೋರಿದ್ದ ವಿವಾದಕ್ಕೆ ತೆರೆಬಿದ್ದಂತಾಗಿದೆ.

ಸುಪ್ರೀಂ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದರೂ ಸಹ ಭಕ್ತಸಮೂಹದ ಮಧ್ಯೆ ಭಿನ್ನಾಭಿಪ್ರಾಯ ಇತ್ತು. ಆದರೆ ಇದೀಗ ಉಭಯ ಮಠಾಧೀಶರು ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಕ್ತ ಸಮೂಹದಲ್ಲಿ ಅಡಗಿದ್ದ ಆತಂಕ, ದುಗುಡವನ್ನು ದೂರ ಮಾಡಿದ್ದಾರೆ.

ಶನಿವಾರ ಬೆಂಗಳೂರಿನ ಉತ್ತರಾದಿಮಠಕ್ಕೆ ಭೇಟಿ ನೀಡಿದ ಮಂತ್ರಾಲಯ ರಾಯರಮಠದ ಮಠಾಧೀಶರಾದ ಶ್ರೀ ಸುಭುದೇಂದ್ರರನ್ನು ಸಾವಿರಾರು ಭಕ್ತರೊಂದಿಗೆ ಉತ್ತರಾದಿಮಠದ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಗಳು ಬರಮಾಡಿಕೊಂಡರು. ಉಭಯ ಶ್ರೀಗಳು ಮಾತುಕತೆ ನಡೆಸಿದರು. ಉಭಯ ಮಠಾಧೀಶರು ಪರ್ಯಾಯ ಪದ್ಧತಿಯಲ್ಲಿ ಆರಾಧನೆ ನೆರವೇರಿಸುವುದು, ಹಿಂದೆ ಇರಬಹುದಾದ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸೌಹಾರ್ದತೆಯಿಂದ ಮುಂದುವರೆಯುವುದು, ಇನ್ನು ಮುಂದೆ ನಮ್ಮ ಮಧ್ಯೆ ಯಾವುದೇ ಸಣ್ಣ ಭಿನ್ನಾಭಿಪ್ರಾಯಗಳು ಬಾರದಂತೆ ನೋಡಿಕೊಳ್ಳುವುದು, ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಉಭಯ ಮಠಗಳ ಇಲ್ಲ-ಸಲ್ಲದ ವಿಷಯಗಳು ಹರಿದಾಡುತ್ತಿವೆ. ಇದಕ್ಕೆ ಕಡಿವಾಣ ಹಾಕುವುದು ನಮ್ಮ ಕರ್ತವ್ಯವಾಗಿದೆ. ಉಭಯ ಮಠಗಳು, ಮಠಗಳ ಭಕ್ತರ ಮಧ್ಯೆ ಸೌಹಾರ್ಧತೆ ಮೂಡಿಸುವುದು, ಬೇರೆಯವರ ಬಾಯಿಗೆ ಆಹಾರವಾಗದಿರುವದು ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚಿತ ಒಪ್ಪಂದಕ್ಕೆ ಉಭಯ ಮಠಾಧೀಶರು ಸಹಿ ಹಾಕಿದರು.

ಎರಡೂ ಮಠಗಳ ಸಾವಿರಾರು ಭಕ್ತರು ಹರ್ಷೋದ್ಗಾರದ ಮಧ್ಯೆ ಶ್ರೀಗಳಿಗೆ ಜಯಕಾರ ಹಾಕಿದರು. ಇನ್ನು ಮುಂದೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಂಬಂಧಿಸಿರದ, ಮಠಗಳ ಆಂತರಿಕ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಾರದಂತೆ ನೋಡಿಕೊಳ್ಳಬೇಕು. ಭಕ್ತರು ಆ ಮಠ-ಈ ಮಠ ಎಂದು ತಾರತಮ್ಯ ಮಾಡದೇ ಸನಾತನ ಧರ್ಮವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಕೈಗೊಳ್ಳಬೇಕು ಎನ್ನುವುದು ಮಠಾಧೀಶರ ಅಭಿಪ್ರಾಯವಾಗಿತ್ತು. ಅನೇಕ ಮಠಗಳ ಮಠಾಧೀಶರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭಕ್ಕೆ ಸಾಕ್ಷಿಯಾದರು.

Previous articleವೆನೆಜುವೆಲಾ ಅಧ್ಯಕ್ಷ, ಪತ್ನಿಯನ್ನೇ ಹೊತ್ತೊಯ್ದ ಅಮೆರಿಕ ಸೈನಿಕರು!