ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಸ್ವಚ್ಛ ಭಾರತ ಅಭಿಯಾನದಡಿ ಬಟ್ಟೆ ಕೈಚೀಲ ಖರೀದಿಯಲ್ಲಿ ಅಕ್ರಮ ನಡೆಸಿದ್ದಾರೆ ಎಂಬ ಆರೋಪದಡಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುವ ಪೂರ್ವಾನುಮತಿಗೆ ಮುಂದಾಗುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
ಮೈಸೂರಿನ ವಕೀಲ ಎನ್.ಆರ್.ರವಿಚಂದ್ರೇಗೌಡ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪೀಠವು ರೋಹಿಣಿ ವಿರುದ್ಧದ ಆರೋಪದ ತನಿಖೆಗೆ ನಿರಾಕರಿಸಿದ್ದ ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಡಿಪಿಎಆರ್) ಆದೇಶವನ್ನು ರದ್ದುಪಡಿಸಿದೆ. ಅಲ್ಲದೇ ಮುಂದಿನ 4 ವಾರಗಳಲ್ಲಿ ತನಿಖೆ ಪ್ರಕ್ರಿಯೆ ಆರಂಭಿಸಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ.
ಸ್ವಚ್ಛಭಾರತ ಅಭಿಯಾನದಡಿ ಪ್ಲಾಸ್ಟಿಕ್ ಬಳಕೆ ತಡೆಗೆ ಬಟ್ಟೆ ಕೈಚೀಲಗಳನ್ನು ಖರೀದಿಸಲು ಅಂದಿನ ಡಿಸಿ ನಿರ್ದೇಶನ ನೀಡಿದ್ದರು. ಪ್ರತಿ ಬಟ್ಟೆ ಕೈಚೀಲ ಮುಕ್ತ ಮಾರುಕಟ್ಟೆಯಲ್ಲಿ 13 ರೂ. ಇದ್ದರೂ 52 ರೂ.ಗಳಿಗೆ ಖರೀದಿಸಲಾಗಿದೆ. ಇದರಿಂದ ಬೊಕ್ಕಸಕ್ಕೆ 7.65 ಕೋಟಿ ರೂ. ನಷ್ಟವಾಗಿದೆ. ಅಕ್ರಮ ಕುರಿತಂತೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕು, ಎಂದು ಕೋರಿ 2021ರ ಅಕ್ಟೋಬರ್ 13ರಂದು ಅಂದಿನ ಮೈಸೂರು ಎಸಿಬಿ ಕಚೇರಿಗೆ ವಕೀಲ ರವಿಚಂದ್ರೇಗೌಡ ದೂರು ನೀಡಿದ್ದರು. ಆದರೆ ಈ ದೂರು ಆಧರಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ನಡೆಸಲು ರಾಜ್ಯ ಸರಕಾರ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ದೂರುದಾರ ವಕೀಲರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ಬಿಪಿನ್ ಹೆಗಡೆ ವಾದ ಮಂಡಿಸಿದ್ದರು.






















