ಬೆಂಗಳೂರು ನಗರದಲ್ಲಿ ಬುಧವಾರ ಬಿಟ್ಟು ಬಿಡದೆ ಸುರಿದ ಮಳೆ ಹಲವು ಅವಾಂತರ ಸೃಷ್ಟಿಸಿದೆ. ಹಲವು ರಸ್ತೆಗಳು ನದಿಯಂತಾಗಿದ್ದವು. ಬೆಂಗಳೂರು -ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹರಿಯುವ ಚಿತ್ರಗಳು ವೈರಲ್ ಆಗಿವೆ.
ಮಳೆರಾಯ ಬುಧವಾರ ಮಧ್ಯಾಹ್ನದಿಂದ ಬಿಟ್ಟುಬಿಡದೆ ರಾತ್ರಿ ವರೆಗೂ ಧಾರಾಕಾರವಾಗಿ ಸುರಿದ ಪರಿಣಾಮ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ 44ರ ಎಲೆಕ್ಟ್ರಾನಿಕ್ ಸಿಟಿ ಬಳಿಯ ವೀರಸಂದ್ರ ಗೇಟ್ ಬಳಿ ರಸ್ತೆ ನದಿಯಂತಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರಿನಲ್ಲಿ ಸಿಲುಕಿ ಕೆಟ್ಟುನಿಂತ ವಾಹನಗಳು ಮುಂದೆ ಚಲಿಸಲು ಹಿಂದೇಟು ಹಾಕಿದ್ದು, ಇದರಿಂದ ವಿವಿಧ ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಬುಧವಾರ ಬೆಳಿಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಸಾಮಾನ್ಯವಾಗಿತ್ತು. ಆಗಾಗ ಎನ್ನುವಂತೆ ತುಂತುರು ಮಳೆ ಸುರಿಯುತ್ತಿತ್ತು. ಮಧ್ಯಾಹ್ನದ ವೇಳೆಗೆ ದಟ್ಟವಾದ ಕಪ್ಪನೆಯ ಮೋಡಗಳು ಆಗಸದಲ್ಲಿ ಜಮಾವಣೆಗೊಂಡು ಸುರಿಮಳೆ ಸುರಿಯಿತು. ಇದರಿಂದಾಗಿ ಕೂಡ್ಲುಗೇಟ್, ಹೊಸರೋಡ್ ವೃತ್ತ, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ ಬಳಿಯ ವೀರಸಂದ್ರ ಗೇಟ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ದ್ವಿಚಕ್ರವಾಹನ ಸವಾರರು ಮಳೆಯಲ್ಲಿ ನೆನೆದುಕೊಂಡು ಮುಂದೆಯು ಹೋಗದೆ ಹಿಂದೆಯು ಸಾಗಲು ಸಾಧ್ಯವಾಗದೆ ಪರದಾಡಿದರು.
ವಾಹನ ಸವಾರರ ಪರದಾಟ: ದ್ವಿಚಕ್ರ ವಾಹನ, ಕಾರು, ಆಟೋ ರಿಕ್ಷಾ, ಶಾಲಾ ವಾಹನಗಳು, ಸರಕು ಸಾಗಾಣೆ ವಾಹನಗಳು ಮಳೆ ನೀರಿನಲ್ಲಿ ಸಿಲುಕಿದವು. ಇದರಿಂದ ವಾಹನಗಳ ಸೈಲನ್ಸ್‌ರ್ ಒಳಗೆ ನೀರು ಹೊಕ್ಕು ಇಂಜಿನ್ ಕೈಕೊಟ್ಟ ಕಾರಣ ರಸ್ತೆಯ ಮಧ್ಯದಲ್ಲಿಯೇ ಕೆಟ್ಟು ನಿಂತವು. ಸುರಿಯುತ್ತಿದ್ದ ಮಳೆಯಲ್ಲಿಯೇ ಖಾಸಗಿ ಶಾಲಾ ವಾಹನಗಳನ್ನು ಹಗ್ಗ ಕಟ್ಟಿ ಎಳೆದು ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿತು.
ಮಹಿಳಾ ಸವಾರರ ಸ್ಕೂಟರ್‌ಗಳು ಕೈಕೊಟ್ಟ ಕಾರಣ ಸವಾರರು ಪರದಾಡಿದರು. ಪ್ರತಿ ಬಾರಿ ಮಳೆ ಬಂದಾಗ ಇದೇ ಗೋಳು ಇದಕ್ಕೆ ಮುಕ್ತಿಯಾವಾಗ ಸಿಗುತ್ತದೋ? ಎಂದು ಜನರು ತಮ್ಮ ಅಳಲುತೊಡಿಕೊಂಡರು. ಮಳೆ ಬಂದರೆ ಬೊಮ್ಮನಹಳ್ಳಿಯಿಂದ ಅತ್ತಿಬೆಲೆ ವರೆಗೂ ಹಲವಾರು ಕಡೆಗಳಲ್ಲಿ ಇದೇ ಗೋಳು ಇದಕ್ಕೆ ಶಾಶ್ವತ ಪರಿಹಾರ ಎಂಬುದು ಕನಸಿನ ಮಾತಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆ ಬಳಿ ಟೋಲ್ ಎರಡು ಕಡೆ ವಸೂಲು ಮಾಡಲಾಗುತ್ತಿದೆ. ಈ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ನಿರ್ವಹಣೆ ಉಸ್ತುವಾರಿಯನ್ನು ವಹಿಸಿಕೊಂಡಿರುವ ಬಿಇಟಿಪಿಎಲ್ ಸಂಸ್ಥೆಯ ಕಾರ್ಯವೈಖರಿಯನ್ನು ಕಂಡು ದಿನನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ರೋಸಿ ಹೋಗಿದ್ದಾರೆ.