ಮಾಜಿ ಪ್ರಧಾನಿ ಹೆಚ್‌. ಡಿ ದೇವೇಗೌಡ ಆರೋಗ್ಯ ಸ್ಥಿರ: ಆಸ್ಪತ್ರೆಯಿಂದ ಡಿಸ್ಚಾರ್ಜ್

0
64

ಬೆಂಗಳೂರು: ಹಿರಿಯ ನಾಯಕ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರ ಆರೋಗ್ಯ ಸ್ಥಿತಿಯು ಈಗ ಸ್ಥಿರವಾಗಿದ್ದು, ವೈದ್ಯರ ಸಲಹೆಯ ಮೇರೆಗೆ ಅವರು ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಕಳೆದ ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೇವೇಗೌಡ ಅವರನ್ನು ಅಕ್ಟೋಬರ್ 6ರಂದು ಬೆಂಗಳೂರು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಜ್ವರ ಹಾಗೂ ಯೂರಿನ್ ಇನ್‌ಫೆಕ್ಷನ್‌ನ ಸಮಸ್ಯೆಯಿಂದ ಅವರು ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದರು.

ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡವು ದೇವೇಗೌಡರಿಗೆ ನಿರಂತರ ಚಿಕಿತ್ಸೆ ನೀಡುತ್ತಿದ್ದು, ಅವರ ಆರೋಗ್ಯದಲ್ಲಿ ಕ್ರಮೇಣ ಚೇತರಿಕೆ ಕಂಡುಬಂದಿದೆ. ವೈದ್ಯಕೀಯ ಪರೀಕ್ಷೆಗಳಲ್ಲಿ ಎಲ್ಲವೂ ಸಾಮಾನ್ಯ ಸ್ಥಿತಿಗೆ ಬಂದಿರುವುದರಿಂದ ಸೋಮವಾರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಮಣಿಪಾಲ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ವೈದ್ಯರ ಸಲಹೆಯಂತೆ ದೇವೇಗೌಡ ಅವರು ಮುಂದಿನ ಕೆಲವು ದಿನಗಳು ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದು, ಯಾವುದೇ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.

ಹಿರಿಯ ರಾಜಕಾರಣಿಯಾಗಿ, ರಾಷ್ಟ್ರ ರಾಜಕೀಯದಲ್ಲಿ ತಮ್ಮ ವಿಶಿಷ್ಟ ಸ್ಥಾನವನ್ನು ಹೊಂದಿರುವ ದೇವೇಗೌಡ ಅವರ ಆರೋಗ್ಯದ ಕುರಿತು ರಾಜ್ಯ ಹಾಗೂ ರಾಷ್ಟ್ರದ ವಿವಿಧ ರಾಜಕೀಯ ನಾಯಕರು, ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದರು. ಇದೀಗ ಅವರ ಚೇತರಿಕೆ ಬಗ್ಗೆ ತಿಳಿದು ಎಲ್ಲೆಡೆ ನಿಟ್ಟುಸಿರು ಬಿಟ್ಟಿದ್ದಾರೆ.

ವೈದ್ಯರ ಸೂಚನೆಯಂತೆ ದೇವೇಗೌಡರಿಗೆ ಇನ್ನೂ 15 ದಿನ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಭೇಟಿ ಮಾಡಲು ಅವರ ನಿವಾಸಕ್ಕೆ ದಯವಿಟ್ಟು ತೆರಳಬೇಡಿ ಎಂದು ಜನತಾದಳ ಸಾಮಾಜಿ ಜಾಲತಾಣದಲ್ಲಿ ವಿನಂತಿಸಿದೆ. ದೇವೇಗೌಡರು ವಿಶ್ರಾಂತಿ ಬಳಿಕ, ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನಕ್ಕೆ ಖುದ್ದು ಆಗಮಿಸಿ ಎಲ್ಲರನ್ನೂ ಭೇಟಿಯಾಗಲಿದ್ದಾರೆ ಎಂದು ತಿಳಿಸಲಾಗಿದೆ.

Previous articleKantara Chapter 1: ತೆರೆಮರೆಯ ನೋವು ತೋಡಿಕೊಂಡ ರಿಷಬ್ ಶೆಟ್ಟಿ
Next articleಶಾವಿಗೆ ಉದ್ಯಮ ಮಹಿಳೆಯರ ಸಂಜೀವಿನಿ

LEAVE A REPLY

Please enter your comment!
Please enter your name here