ದಾಸೋಹದಿನಾಚರಣೆ ಮರೆತ ಸರ್ಕಾರ: ರಾಜ್ಯಪಾಲರಿಗೆ ಮನವಿ

0
4

2ನೇ ಬಾರಿಗೆ ರಾಜ್ಯಪಾಲರಿಗೆ ಸಂಘಟನೆಗಳ ಮನವಿ

ಬೆಂಗಳೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಕರ್ನಾಟಕ ರತ್ನ, ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಶಿವಯೋಗಿಗಳವರು ಲಿಂಗೈಕ್ಯರಾದ ದಿನವಾದ ಜನವರಿ 21ನ್ನು ‘ದಾಸೋಹ ದಿನ’ ಎಂದು ರಾಜ್ಯ ಸರ್ಕಾರದ ಮಟ್ಟದಲ್ಲಿ ಆಚರಿಸುವುದನ್ನು ಕಾಂಗ್ರೆಸ್ ಸರ್ಕಾರ ಮರೆತಿದೆ ಎಂದು ಆರೋಪಿಸಿ, ವಿವಿಧ ಸಂಘಟನೆಗಳ ಮುಖಂಡರು ರಾಜ್ಯಪಾಲರಿಗೆ ಎರಡನೇ ಬಾರಿ ಮನವಿ ಸಲ್ಲಿಸಿದರು.

2021ರಲ್ಲಿ ಅಂದಿನ ಬಿಜೆಪಿ ಸರ್ಕಾರವು ಜನವರಿ 21ರಂದು ದಾಸೋಹ ದಿನವಾಗಿ ಆಚರಿಸುವುದಾಗಿ ಅಧಿಕೃತವಾಗಿ ಘೋಷಿಸಿ ಸುತ್ತೋಲೆ ಹೊರಡಿಸಿತ್ತು. ಆದರೆ ಸರ್ಕಾರ ಬದಲಾಗಿದ ಬಳಿಕ ಈ ಮಹತ್ವದ ನಿರ್ಧಾರವನ್ನು ಜಾರಿಗೆ ತರಲಾಗಿಲ್ಲ ಎಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಇದನ್ನೂ ಓದಿ:  ಮುಂದಿನ ಹತ್ತು ವರ್ಷದ ಒಳಗೆ ಕಲ್ಯಾಣನಾಡಲ್ಲಿ ಪ್ರಾದೇಶಿಕ ಸಮಾನತೆ

ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ಸಂಘಟನೆಗಳ ಮುಖಂಡರು ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಹಿಂದಿನ ಸರ್ಕಾರ ಹೊರಡಿಸಿದ್ದ ಸುತ್ತೋಲೆಯ ಪ್ರತಿಯನ್ನು ಸಲ್ಲಿಸಿದರು. ಈ ವೇಳೆ ಮಾತನಾಡಿದ ಮಹಾಸಭಾ ರಾಜ್ಯಾಧ್ಯಕ್ಷ ಮೋಹನ್ ಕುಮಾರ್ ಅವರು, ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ತಮ್ಮ ಜೀವನವಿಡೀ ಅನ್ನದಾಸೋಹ, ವಿದ್ಯಾದಾಸೋಹ ಹಾಗೂ ಜ್ಞಾನದಾಸೋಹದ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಇಂತಹ ಮಹಾನ್ ವ್ಯಕ್ತಿತ್ವದ ಲಿಂಗೈಕ್ಯ ದಿನವನ್ನು ‘ದಾಸೋಹ ದಿನ’ವಾಗಿ ಆಚರಿಸುವುದು ಕೇವಲ ಒಂದು ಆಚರಣೆ ಮಾತ್ರವಲ್ಲ, ಅದು ಸಮಾಜದ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಸಾರುವ ಮಹತ್ವದ ಹೆಜ್ಜೆಯಾಗಲಿದೆ ಎಂದು ಅವರು ಹೇಳಿದರು. ಆದ್ದರಿಂದ ಹಿಂದಿನ ಸರ್ಕಾರದ ನಿರ್ಧಾರವನ್ನು ಮುಂದುವರಿಸಿ, ಜನವರಿ 21ರಂದು ಸರ್ಕಾರದ ವತಿಯಿಂದ ಅಧಿಕೃತವಾಗಿ ದಾಸೋಹ ದಿನ ಆಚರಿಸಬೇಕು ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ:  VB-G RAM G ಕಾಯ್ದೆ ಹಿಂಪಡೆಯಲು ಪ್ರಧಾನಿ‌ ಮೋದಿಗೆ ಆಗ್ರಹ

ಈ ಮನವಿ ಸಲ್ಲಿಕೆ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಬಿ.ಎಸ್. ವಿಜಯ್ ಕುಮಾರ್, ಎ.ಎಂ. ನಾಗೇಶ್, ಅನಿಲ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Previous articleಮುಂದಿನ ಹತ್ತು ವರ್ಷದ ಒಳಗೆ ಕಲ್ಯಾಣನಾಡಲ್ಲಿ ಪ್ರಾದೇಶಿಕ ಸಮಾನತೆ