ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಗುಹೆಯಲ್ಲಿ ಪತ್ತೆಯಾದ ರಷ್ಯಾದ ಮಹಿಳೆ ಹಾಗೂ ಅವರ ಇಬ್ಬರು ಮಕ್ಕಳ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಕರ್ನಾಟಕ ಹೈಕೋರ್ಟ್, ತಾಯಿ ಮತ್ತು ಮಕ್ಕಳನ್ನು ಅವರ ತವರು ದೇಶವಾದ ರಷ್ಯಾಕ್ಕೆ ವಾಪಸ್ ಕಳಿಸಲು ಆದೇಶ ನೀಡಿದೆ.
ಹೈಕೋರ್ಟ್‌ನ ಜಸ್ಟಿಸ್ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ಪೀಠವು, ಇಸ್ರೇಲ್ ನಾಗರಿಕ ಡ್ರೋರ್ ಶಲೋಮೋ ಗೋಲ್ಡ್ ಸ್ಟೀನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಈ ತೀರ್ಪು ಪ್ರಕಟಿಸಿದೆ. ಅರ್ಜಿದಾರರು ಮಕ್ಕಳ ಹಿತಾಸಕ್ತಿಯನ್ನು ಉಲ್ಲೇಖಿಸಿ, ತಾಯಿ-ಮಕ್ಕಳನ್ನು ತಕ್ಷಣ ರಷ್ಯಾಕ್ಕೆ ಕಳಿಸಲು ಒತ್ತಾಯಿಸಿದ್ದರು.
ಕೇಂದ್ರ ಸರ್ಕಾರಕ್ಕೆ ಸೂಚನೆ: ಹೈಕೋರ್ಟ್ ತನ್ನ ಆದೇಶದಲ್ಲಿ, ಕೇಂದ್ರ ಸರ್ಕಾರವು ತಾಯಿ ಹಾಗೂ ಮಕ್ಕಳ ವಾಪಸಿ ಪ್ರಯಾಣಕ್ಕೆ ಅಗತ್ಯ ದಾಖಲಾತಿಗಳು ಮತ್ತು ಸೌಲಭ್ಯಗಳನ್ನು ಒದಗಿಸಬೇಕು ಎಂದು ನಿರ್ದೇಶಿಸಿದೆ. ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ನೀಡುವ ಮೂಲಕ ಪ್ರಕ್ರಿಯೆ ವಿಳಂಬವಾಗದಂತೆ ನೋಡಿಕೊಳ್ಳುವಂತೆ ಕೋರ್ಟ್ ತೀವ್ರ ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ: ರಷ್ಯಾದ ಮಹಿಳೆ ನೀನಾ ಕುಟಿನಾ, ಕೆಲ ತಿಂಗಳ ಹಿಂದೆ ಗೋಕರ್ಣದ ಗುಹೆಯಲ್ಲಿ ತಮ್ಮ ಮಕ್ಕಳೊಂದಿಗೆ ಪತ್ತೆಯಾಗಿದ್ದರು. ಸ್ಥಳೀಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಪೊಲೀಸರು ಅವರನ್ನು ವಶಕ್ಕೆ ಪಡೆದರು. ಬಳಿಕ ಅವರನ್ನು ತುಮಕೂರು ನಗರದ ಹೊರವಲಯದ ದಿಬ್ಬೂರಿನಲ್ಲಿರುವ ವಿದೇಶಿ ಬಂಧನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಈ ನಡುವೆ ಮಕ್ಕಳ ಭವಿಷ್ಯ ಹಾಗೂ ಅವರ ಹಿತಾಸಕ್ತಿಯ ಕುರಿತು ಚಿಂತನೆ ವ್ಯಕ್ತವಾಗಿತ್ತು.
ಈ ತೀರ್ಪಿನಿಂದ, ನೀನಾ ಕುಟಿನಾ ಮತ್ತು ಅವರ ಮಕ್ಕಳು ಶೀಘ್ರದಲ್ಲೇ ತಮ್ಮ ತವರು ದೇಶ ರಷ್ಯಾಕ್ಕೆ ತೆರಳಲಿದ್ದಾರೆ. ತಾಯಿ-ಮಕ್ಕಳ ಸುರಕ್ಷತೆ, ಮಾನವ ಹಕ್ಕುಗಳು ಹಾಗೂ ಮಕ್ಕಳ ಕಲ್ಯಾಣದ ದೃಷ್ಟಿಯಿಂದ ಹೈಕೋರ್ಟ್ ನೀಡಿದ ಈ ಆದೇಶವನ್ನು ಮಹತ್ವದ ಬೆಳವಣಿಗೆಯೆಂದು ಕಾನೂನು ವಲಯದಲ್ಲಿ ಅಂದಾಜಿಸಲಾಗಿದೆ.


























