ಬೆಂಗಳೂರು: ಗಣೇಶ ಪ್ರತಿಷ್ಠಾಪನೆಗೆ ಮಾರ್ಗಸೂಚಿಗಳೇನು?

0
48

ಬೆಂಗಳೂರು: ಬೆಂಗಳೂರು ನಗರದಲ್ಲಿ ಗೌರಿ-ಗಣೇಶ ಹಬ್ಬ 2025ರ ಆಚರಣೆಗೆ ಸಿದ್ಧತೆಗಳು ಜೋರಾಗಿದೆ. ಜನರ ಹಬ್ಬದ ಖರೀದಿ ಕಳೆಗಟ್ಟಿದ್ದು, ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಿದೆ. ಗಣೇಶ ಹಬ್ಬ ಸಮೀಪಿಸುತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಹಲವು ನಿಯಮಗಳನ್ನು ವಿಧಿಸಿದ್ದಾರೆ.

ಸಂಘ-ಸಂಸ್ಥೆಗಳು ಗಣಪತಿ ವಿಗ್ರಹ ಪ್ರತಿಷ್ಠಾಪಿಸುವ ಸ್ಥಳ, ದಿನ ಸೇರಿದಂತೆ ಇತರೆ ಮಾಹಿತಿ ಸಂಗ್ರಹಿಸಿ ಏಕಗವಾಕ್ಷಿ ಕೇಂದ್ರಗಳಲ್ಲಿ ಅನುಮತಿ ಪಡೆಯುವುದರ ಜತೆಗೆ ವಿಧಿಸಿರುವ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶ ಹೊರಡಿಸಿದ್ದಾರೆ.

ಗಣೇಶ ಹಬ್ಬದ ನೆಪದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಈ ಬಾರಿ ಸ್ವಲ್ಪ ಹೆಚ್ಚಿನ ರೀತಿಯಲ್ಲೇ ನಿಯಮಗಳನ್ನು ವಿಧಿಸಲಾಗಿದೆ. ನಿಯಮದ ಅನುಸಾರ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಪೊಲೀಸ್ ಠಾಣೆ ಸೇರಿದಂತೆ ಅಗತ್ಯವಿರುವ ಕೇಂದ್ರಗಳಲ್ಲಿ ಅನುಮತಿ ಪತ್ರ ಪಡೆಯಬೇಕು. ಆಚರಣೆಯು ಯಾವುದೇ ಸಾರ್ವಜನಿಕರಿಗೆ ತೊಂದರೆಯುಂಟು ಮಾಡದಂತೆ ನಡೆಸಬೇಕು.

ವಿಧಿಸಿರುವ ನಿಯಮಗಳನ್ನು ಪಾಲಿಸದಿದ್ರೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ಮಾಡಿಕೊಟ್ಟರೆ ಅಂತಹವರ ವಿರುದ್ಧ ದಂಡ ವಿಧಿಸುವ ಜತೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ಪೊಲೀಸರು ಈಗಾಗಲೇ ಸ್ಥಳೀಯ ಮಟ್ಟದ ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರ ಸುರಕ್ಷೆಯ ದೃಷ್ಟಿಯಿಂದ ಈ ನಿಯಮಗಳು ಸರಿಯಾದರೂ, ಕೆಲ ನಿಯಮಗಳು ಹಬ್ಬದ ಸಂಭ್ರಮವನ್ನು ಸ್ವಲ್ಪ ಮಟ್ಟಿಗೆ ಕುಗ್ಗಿಸಿದಂತಾಗಿದೆ ಎಂದು ಗಣಪತಿ ಪ್ರತಿಷ್ಠಾಪನಾ ಸಂಘವೊಂದು ಅಭಿಪ್ರಾಯಪಟ್ಟಿದೆ.

ಡಿಜೆಗಿಲ್ಲ ಅನುಮತಿ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಸುವಂತಿಲ್ಲ ಎಂದು ನಗರ ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ಆ.14 ರಂದು ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘಟನೆಯ ಪದಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ವಿಭುಬು ಮತ್ತು ನ್ಯಾ. ಸಿ.ಎಂ.ಜೋಷಿ ಅವರಿದ್ದ ವಿಭಾಗೀಯಪೀಠ ಈ ಆದೇಶ ಮಾಡಿದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸೌಂಡ್ ಸಿಸ್ಟಮ್ ಮತ್ತು ಡಿಜೆಯನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ನಿರ್ಬಂಧಿಸಿ ಪೊಲೀಸರು ಹೊರಡಿಸಿರುವ ಸುತ್ತೋಲೆಯಲ್ಲಿ ಯಾವುದೇ ಕಾನೂನಾತ್ಮಕ ಲೋಪಗಳಿಲ್ಲ.

ಪೊಲೀಸರ ಆದೇಶದ ಪ್ರಕಾರ ವಸತಿ ಪ್ರದೇಶದಲ್ಲಿ ಶಬ್ದದ ಪ್ರಮಾಣವು ಹಗಲಿನ ವೇಳೆ 55 ಡೆಸಿಬಲ್ ಮತ್ತು ರಾತ್ರಿ ವೇಳೆ 45 ಡೆಸಿಬಲ್ ಮೀರದಂತಿರಬೇಕು. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ ಮತ್ತು ಸೌಂಡ್ ಸಿಸ್ಟಮ್‌ನ ಬಳಸುವುದಕ್ಕೆ ಅನುಮತಿ ನೀಡುವುದು ನ್ಯಾಯಾಲಯಕ್ಕೆ ಕಷ್ಟ ಎಂದು ತಿಳಿಸಿದೆ.

ಗೌರಿ-ಗಣೇಶ ಮೂರ್ತಿಗಳ ಖರೀದಿ ಭರಾಟೆ: ಗಣೇಶ ಹಬ್ಬದ ಪ್ರಯುಕ್ತ ನಗರದಲ್ಲಿ ಗಣೇಶ ಖರೀದಿ ಭರಾಟೆ ಜೋರಾಗಿದ್ದು, ನಗರದ ಎಲ್ಲಾ ಭಾಗಗಳಲ್ಲಿ ವಿಧವಿಧವಾದ ಗೌರಿ-ಗಣೇಶ ಮೂರ್ತಿಗಳು ಕಂಗೊಳಿಸುತ್ತಿವೆ. ಸಣ್ಣ ಪ್ರಮಾಣದ ಗಣೇಶಗಳಿಂದ ಹಿಡಿದು ದೊಡ್ಡ ಗಾತ್ರದ ಗಣೇಶಗಳು ಈಗಾಗಲೇ ಮಾರಾಟವಾಗುತ್ತಿದ್ದು, ಪಿಒಪಿ ಗಣೇಶ ಮಾರಾಟ ಮಳಿಗೆಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಖರೀದಿಗಾಗಿ ಆಗಮಿಸುತ್ತಿರುವ ಬಹುತೇಕ ಜನರು ಮಣ್ಣಿನ ಗಣಪತಿಗಳನ್ನೇ ಕೇಳಿ ಪಡೆಯುತ್ತಿದ್ದು, ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಿಸಲು ಮುಂದಾಗಿದ್ದಾರೆ.

ನಿಯಮಗಳ ವಿವರ

  • ರಸ್ತೆ, ಫುಟ್‌ಪಾತ್‌‌ಗಳಲ್ಲಿ ಪೆಂಡಾಲ್ ಹಾಕಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ
  • ಗಣೇಶನನ್ನು ಕೂರಿಸಲು ಏಕಗವಾಕ್ಷಿ ಕೇಂದ್ರದಲ್ಲಿ ಅನುಮತಿ ಪಡೆಯಬೇಕು
  • ಧ್ವನಿವರ್ಧಕಗಳ ಬಳಕೆಗೆ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಅವಕಾಶ
  • ಸಂಘ-ಸಂಸ್ಥೆಗಳ ಹೆಸರಿನಲ್ಲಿ ಬಲವಂತವಾಗಿ ಹಣ ವಸೂಲಿ ಮಾಡುವಂತಿಲ್ಲ
  • ಪೆಂಡಾಲ್‌ಗಳಲ್ಲಿ ಕಡ್ಡಾಯವಾಗಿ ಅಗ್ನಿನಂದಕ ಉಪಕರಣ ಅಳವಡಿಸಿಕೊಳ್ಳಬೇಕು
  • ಪೆಂಡಾಲ್‌ಗಳಲ್ಲಿ ಕನಿಷ್ಠ 5 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಕಡ್ಡಾಯ
  • ರಾತ್ರಿ 10ರ ನಂತರ ನಗರದಲ್ಲಿ ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಕಡ್ಡಾಯವಾಗಿ ಅವಕಾಶವಿಲ್ಲ

Previous articleರಾಕಿಂಗ್ ಸ್ಟಾರ್ ಯಶ್: ಟಾಕ್ಸಿಕ್ ಆ್ಯಕ್ಷನ್ ಶೂಟಿಂಗ್ ಶುರು
Next articleಶ್ರೀಮಂತ ಮತ್ತು ಬಡ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಆಸ್ತಿ ಎಷ್ಟು?

LEAVE A REPLY

Please enter your comment!
Please enter your name here