ಮತ ಕಳ್ಳತನ: ಅಕ್ರಮ ಬಯಲಿಗೆ ಎಳೆಯಲು ಕರ್ನಾಟಕದಲ್ಲಿ ಮುನ್ನುಡಿ

0
90

ಬೆಂಗಳೂರು: ಮತದಾರರ ಹಕ್ಕಿನ ರಕ್ಷಣೆಗಾಗಿ ರಾಹುಲ್ ಗಾಂಧಿ ಮುನ್ನುಡಿ ಬರೆದಿದ್ದಾರೆ ಅದಕ್ಕೆ ನಮ್ಮೆಲ್ಲರ ಒಕ್ಕೊರಲ ಬೆಂಬಲವಿದೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

ಕೇಂದ್ರ ಚುನಾವಣೆ ಆಯೋಗ ಪ್ರಾಯೋಜಿತ ಮತ ಅಕ್ರಮದ ವಿರುದ್ಧ ಇಂದು ಶುಕ್ರವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿ ”ರಾಹುಲ್ ಗಾಂಧಿ ಅವರು ದೇಶದ ಸಂವಿಧಾನ ರಕ್ಷಣೆಗೆ ನಮ್ಮ ಮತ, ನಮ್ಮ ಹಕ್ಕು, ರಕ್ಷಣೆಗೆ ದೊಡ್ಡ ಸಂದೇಶ ರವಾನಿಸಿದ್ದಾರೆ. ಅವರು ದೇಶದ ಪರವಾಗಿ ದಿಟ್ಟ ಹೋರಾಟ ಆರಂಭಿಸಿದ್ದಾರೆ.

ಮತಗಳ್ಳತನದ ವಿರುದ್ಧ ಕರ್ನಾಟಕ ರಾಜ್ಯದಿಂದ ಆರಂಭವಾಗಿರುವ ಪ್ರತಿಭಟನಾ ಅಭಿಯಾನ ಇಡೀ ದೇಶಾದ್ಯಂತ ವ್ಯಾಪಿಸಲಿದೆ. ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ಅಧ್ಯಯನ ಮಾಡಿ, ಮತದಾನದ ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಿ ದಾಖಲೆಗಳ ಸಮೇತ ದೇಶದ ಜನರ ಮುಂದೆ ಇಟ್ಟಿದ್ದಾರೆ. ದೇಶಾದ್ಯಂತ ಮತ ಅಕ್ರಮ ಬಯಲಿಗೆ ಎಳೆಯಲು ಕರ್ನಾಟಕದಲ್ಲಿ ಮುನ್ನುಡಿ ಬರೆಯುತ್ತಿದ್ದಾರೆ ಕರ್ನಾಟಕದಿಂದ ದೇಶಕ್ಕೆ ಮಹತ್ವದ ಸಂದೇಶ ರವಾನಿಸಿದ್ದಾರೆ ಎಂದರು

ಸಾವಿರಾರು ಸಹ ನಾಗರಿಕರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕಾಂಗ್ರೆಸ್‌ ಪಕ್ಷ ನಿಂತಿದೆ. ಮಹದೇವಪುರದಲ್ಲಿ ನಡೆದ ಅಕ್ರಮಗಳು ನಮ್ಮ ಪ್ರಜಾಪ್ರಭುತ್ವದ ಮೇಲಿನ ಈ ದಾಳಿಯಲ್ಲಿ ಕೇವಲ ಒಂದು ಸಣ್ಣ ಭಾಗ ಮಾತ್ರ. ಒಗ್ಗಟ್ಟಿನಿಂದ, ನಮ್ಮ ಸಂವಿಧಾನವನ್ನು ರಕ್ಷಿಸಲು, ಪ್ರತಿ ಮತವನ್ನು ರಕ್ಷಿಸಲು ಮತ್ತು ನಮ್ಮ ಪ್ರಜಾಪ್ರಭುತ್ವ ಪ್ರಕ್ರಿಯೆಯ ಆತ್ಮವನ್ನು ಮರಳಿ ಪಡೆಯಲು ನಾವು ಎದ್ದೇಳುತ್ತೇವೆ. ನ್ಯಾಯಕ್ಕಾಗಿ ಈ ಹೋರಾಟದಲ್ಲಿ ನಮ್ಮೊಂದಿಗೆ ಸೇರಿ, ಏಕೆಂದರೆ ಪ್ರತಿಯೊಂದು ಧ್ವನಿಯೂ ಮುಖ್ಯವಾಗಿದೆ! ಎಂದು ನಾಗರಿಕರಿಗೆ ಕರೆ ಕೊಟ್ಟಿದ್ದಾರೆ.

ಬಿಜೆಪಿಯವರು ಚಿಲುಮೆ ಸಂಸ್ಥೆ ಮೂಲಕ ತಮ್ಮ 8 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಿಎಲ್‌ಓಗಳಾಗಿ ನೇಮಿಸಿತ್ತು. ಇದರ ವಿರುದ್ಧ ಹೋರಾಟ ಮಾಡಿ ನಾವು ನಿಯಂತ್ರಣ ಮಾಡಿದೆವು. ಚುನಾವಣೆ ಫಲಿತಾಂಶದ ಸಂದರ್ಭದಲ್ಲೇ ದೂರು ನೀಡಬೇಕಿತ್ತು. ಆದರೆ ದೇಶದಲ್ಲಿ ಇದುವರೆಗೂ ಚುನಾವಣಾ ದೂರುಗಳು ಇತ್ಯರ್ಥವಾಗಿಲ್ಲ. ಹೀಗಾಗಿ ನಾವು ಅದನ್ನು ಬಿಟ್ಟಿದ್ದೆವು.

ಜನರ ಮುಂದೆ ಈ ಅಕ್ರಮಗಳನ್ನು ಬಹಿರಂಗಪಡಿಸಲು ತೀರ್ಮಾನಿಸಿದ್ದೇವೆ. ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ಈ ಅಕ್ರಮಗಳಿಗೆ ಯಾರು ಹೊಣೆ? ಎಂದು ಪ್ರಶ್ನಿಸುತ್ತಿದ್ದಾರೆ. ಈ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ತಂದುಕೊಟ್ಟ ಪಕ್ಷದ ಮುಖಂಡರಾಗಿ ಅವರು ಧ್ವನಿ ಎತ್ತುತ್ತಿದ್ದಾರೆ. ನಮ್ಮ ಹಕ್ಕು, ನಮ್ಮ ಪ್ರಜಾಪ್ರಭುತ್ವವನ್ನು ನಾವು ಕಾಪಾಡಬೇಕು ಎಂದರು.

“ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎಐಸಿಸಿ ಮಾನವ ಹಕ್ಕು ವಿಭಾಗದ ಸಭೆಯಲ್ಲಿ ರಾಹುಲ್ ಗಾಂಧಿ ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ರಕ್ಷಣೆ ಮಾಡಲು, ಆಸ್ಪತ್ರೆಗಳಲ್ಲಿ ಬ್ಲಡ್ ಬ್ಯಾಂಕ್ ಇರುವಂತೆ ಪ್ರತಿ ಕ್ಷೇತ್ರದಲ್ಲಿ ಲೀಗಲ್ ಬ್ಯಾಂಕ್ ಸ್ಥಾಪನೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಅವರ ಸೂಚನೆಗೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದಿದ್ದಾರೆ.

Previous articleಉಪರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಅಚ್ಚರಿ ಅಭ್ಯರ್ಥಿ ಆಯ್ಕೆ ಹೊಣೆ ಇಬ್ಬರ ಹೆಗಲಿಗೆ
Next articleಧರ್ಮಸ್ಥಳ ಘನತೆ ಕುಗ್ಗಿಸುವ ಯತ್ನ ಅಪರಾಧ: ವಿಶ್ವ ಹಿಂದೂ ಪರಿಷದ್

LEAVE A REPLY

Please enter your comment!
Please enter your name here