ಬಹುಚರ್ಚಿತ ರೇಣುಕಾಸ್ವಾಮಿ ಕೊಲೆ ಪ್ರಕರಣವು ಇಂದು (ನವೆಂಬರ್ 10) ಮಹತ್ವದ ವಿಚಾರಣಾ ಹಂತಕ್ಕೆ ಕಾಲಿಡುತ್ತಿದೆ. ನಟ ದರ್ಶನ್ ತೂಗುದೀಪ (ಎ2), ಪವಿತ್ರಾ ಗೌಡ (ಎl) ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳ ವಿರುದ್ಧದ ನ್ಯಾಯಾಂಗ ಪ್ರಕ್ರಿಯೆಯು 64ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅಧಿಕೃತವಾಗಿ ಆರಂಭಗೊಳ್ಳುತ್ತಿದ್ದು, ಪ್ರಾಸಿಕ್ಯೂಷನ್ ಪರವಾಗಿ ಸಾಕ್ಷಿಗಳ ವಿಚಾರಣೆ ನಡೆಯಲಿದೆ.
ಇಂದಿನಿಂದ ಆರೋಪಿಗಳಾದ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಎಲ್ಲ 17 ಮಂದಿ ಆರೋಪಿಗಳ ಭವಿಷ್ಯ ನಿರ್ಧಾರವಾಗಲಿದೆ. ಪ್ರಕರಣದ ವಿಚಾರಣೆಯು ನ್ಯಾಯಾಧೀಶ ಐ.ಪಿ. ನಾಯಕ್ ಅವರ ಸಮ್ಮುಖದಲ್ಲಿ ನಡೆಯಲಿದೆ. ಕಳೆದ ವಾರ, ನವೆಂಬರ್ 3 ರಂದು, ನ್ಯಾಯಾಲಯವು ಎಲ್ಲ 17 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಿತ್ತು.
ಪೊಲೀಸರು ಸಲ್ಲಿಸಿದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯದಲ್ಲಿ ಓದಿ ಹೇಳಿದಾಗ, ಎಲ್ಲ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ಬಲವಾಗಿ ನಿರಾಕರಿಸಿದ್ದಾರೆ. ಪೊಲೀಸರು ಹೊರಿಸಿರುವ ಆರೋಪಗಳು ಸುಳ್ಳು, ನಾವು ವಿಚಾರಣೆ ಎದುರಿಸುತ್ತೇವೆ ಎಂದು ಅವರು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ಅವರು ನ್ಯಾಯಾಲಯದ ಮುಂದೆ ಸಾಕ್ಷಿಗಳನ್ನು ಹಾಜರುಪಡಿಸಿ, ಆರೋಪಗಳನ್ನು ಸಾಬೀತುಪಡಿಸಲು ಪ್ರಯತ್ನಿಸಲಿದ್ದಾರೆ. ನಟ ದರ್ಶನ್ ಪರವಾಗಿ ವಕೀಲ ಸುನೀಲ್ ಕುಮಾರ್ ಮತ್ತು ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲ ಬಾಲನ್ ಅವರು ವಾದ ಮಂಡಿಸಲಿದ್ದಾರೆ.
ಪ್ರಮುಖ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ನಿಂದ ಈ ಹಿಂದೆ ದೊರೆತಿದ್ದ ಜಾಮೀನನ್ನು ಆಗಸ್ಟ್ 14, 2025ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಪವಿತ್ರಾ ಗೌಡ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸಹ ಸುಪ್ರೀಂ ಕೋರ್ಟ್ ನವೆಂಬರ್ 6ರಂದು ವಜಾಗೊಳಿಸಿದೆ.
ಈ ಹಿನ್ನೆಲೆಯಲ್ಲಿ, ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳು ಇಡೀ ವಿಚಾರಣಾ ಪ್ರಕ್ರಿಯೆಯ ಉದ್ದಕ್ಕೂ ನ್ಯಾಯಾಂಗ ಬಂಧನದಲ್ಲಿಯೇ ಮುಂದುವರಿಯಲಿದ್ದಾರೆ.
ಚಿತ್ರರಂಗದಲ್ಲಿ ಮೌನ, ಅಭಿಮಾನಿಗಳಲ್ಲಿ ಆತಂಕ: ಈ ಸೂಕ್ಷ್ಮ ಪರಿಸ್ಥಿತಿಯ ಬಗ್ಗೆ ಕನ್ನಡ ಚಿತ್ರರಂಗದ ಬಹುತೇಕ ಗಣ್ಯರು ಮೌನಕ್ಕೆ ಶರಣಾಗಿದ್ದಾರೆ. ಯಾರೂ ಬಹಿರಂಗವಾಗಿ ಪ್ರತಿಕ್ರಿಯೆ ನೀಡುತ್ತಿಲ್ಲವಾದರೂ, ಒಳಗೊಳಗೆ ಈ ಬೆಳವಣಿಗೆಗಳ ಬಗ್ಗೆ ಆತಂಕ ಮತ್ತು ಚರ್ಚೆ ನಡೆಯುತ್ತಿದೆ.
ಮತ್ತೊಂದೆಡೆ, ಅಭಿಮಾನಿ ವಲಯದಲ್ಲಿ ತೀವ್ರ ಆತಂಕ ಮತ್ತು ಕುತೂಹಲ ಹೆಚ್ಚಾಗಿದೆ. ದರ್ಶನ್ ಅವರ ಅಭಿಮಾನಿ ಸಂಘಟನೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ವಾದಗಳು ತಾರಕಕ್ಕೇರಿವೆ. ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಧೈರ್ಯ ತುಂಬುವ ಮತ್ತು ಬೆಂಬಲ ಸೂಚಿಸುವ ಪೋಸ್ಟ್‌ಗಳನ್ನು ಹಾಕುತ್ತಿದ್ದು, ತನಿಖೆ ನಡೆದು ಪರಿಸ್ಥಿತಿ ಬೇಗ ಸುಧಾರಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
70 ಸಾಕ್ಷ್ಯಗಳು ನಿರ್ಣಾಯಕ: ಇಂದು ಪ್ರಾಸಿಕ್ಯೂಷನ್ ಪರವಾಗಿ ಸಾಕ್ಷಿಗಳ ವಿಚಾರಣೆ ಆರಂಭವಾಗಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಒಟ್ಟು 230ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಅದರಲ್ಲಿ ಸುಮಾರು 70 ಸಾಕ್ಷ್ಯಗಳು ಅತ್ಯಂತ ಪ್ರಮುಖವಾಗಿವೆ ಎನ್ನಲಾಗಿದೆ.
ವಿಚಾರಣೆಯ ಸಮಯದಲ್ಲಿ ಮೊದಲು ಯಾರನ್ನು ಸಾಕ್ಷಿಯಾಗಿ ವಿಚಾರಣೆ ಮಾಡಬೇಕು ಎಂಬುದರ ವಿವರಗಳನ್ನು ಪ್ರಾಸಿಕ್ಯೂಷನ್ ಪರ ವಕೀಲರು ಕೋರ್ಟ್‌ಗೆ ಒದಗಿಸಲಿದ್ದಾರೆ.
ಕೊಲೆ ಆರೋಪಿ ನಟ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಪೊಲೀಸರು ಇಂಚಿಂಚೂ ಶೋಧ, ಮಹಜರು ಪ್ರಕ್ರಿಯೆ ನಡೆಸಿ ಅಗತ್ಯ ಸಾಕ್ಷ್ಯಗಳನ್ನ ಸಂಗ್ರಹಿಸಿದ್ದು, ಕೃತ್ಯಕ್ಕೆ ಬಳಸಿದ ವಸ್ತುಗಳು, ಕೃತ್ಯದ ವೇಳೆ ಆರೋಪಿಗಳು ಧರಿಸಿದ್ದ ಬಟ್ಟೆ, ಶೂ, ಚಪ್ಪಲಿಗಳು, ಕೃತ್ಯದ ವೇಳೆ ಬಳಕೆಯಾದ ವಾಹನಗಳು, ಮೊಬೈಲ್ ಫೋನ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ಪತ್ತೆ ಹಚ್ಚಿದ ಪೊಲೀಸರು, ಅವುಗಳನ್ನು ಸೀಜ್ ಮಾಡಿದ್ದಾರೆ.























