“ಹಿಂದೂ ರಾಷ್ಟ್ರದ ಮಾತು ಬಿಡಿ, ಶಾಲೆಗಳನ್ನು ದತ್ತು ತಗೊಳ್ಳಿ”: RSSಗೆ ಪ್ರದೀಪ್ ಈಶ್ವರ್ ನೇರ ಸವಾಲು!

0
9

ಬೆಂಗಳೂರು: “ನಿಮ್ಮ ಮೇಲೆ ಪೂಜ್ಯ ಭಾವನೆ ಇತ್ತು, ಆದರೆ ನೀವೂ ಕೂಡ ಅಭಿವೃದ್ಧಿ, ಹಸಿವು, ನಿರುದ್ಯೋಗದ ಬಗ್ಗೆ ಮಾತನಾಡುವುದನ್ನು ಬಿಟ್ಟು ‘ಹಿಂದೂ ರಾಷ್ಟ್ರ’ದ ಜಪ ಮಾಡುತ್ತಿದ್ದೀರಿ,” – ಹೀಗೆಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ವಿರುದ್ಧ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿಧಾನಸೌಧದಲ್ಲಿ ತೀವ್ರವಾಗಿ ಗುಡುಗಿದ್ದಾರೆ.

ಕೇವಲ ವಾಗ್ದಾಳಿ ನಡೆಸದೆ, ದೇಶದ ಎಲ್ಲಾ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವಂತೆ ಆರ್‌ಎಸ್‌ಎಸ್‌ಗೆ ಬಹಿರಂಗ ಸವಾಲು ಹಾಕುವ ಮೂಲಕ ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದ್ದಾರೆ. ಸ್ವಾತಂತ್ರ್ಯದ ಕ್ರೆಡಿಟ್ ನಿಮಗೆ ಬೇಕಿಲ್ಲ ವಿಧಾನಸೌಧದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಆರ್‌ಎಸ್‌ಎಸ್‌ನ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

“ನಮ್ಮ ತಾತ ಸ್ವಾತಂತ್ರ್ಯ ಹೋರಾಟಗಾರ. ಈ ದೇಶದ ಕೋಟ್ಯಂತರ ಜನರ ಹಿರಿಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. 35 ಕೋಟಿ ಜನರು ಹೋರಾಡಿದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಇದರ ಶ್ರೇಯಸ್ಸನ್ನು ಕೇವಲ ಆರ್‌ಎಸ್‌ಎಸ್ ಒಂದೇ ತೆಗೆದುಕೊಳ್ಳುವ ಅಗತ್ಯವಿಲ್ಲ,” ಎಂದು ಅವರು ಖಾರವಾಗಿ ನುಡಿದರು.

ಅಭಿವೃದ್ಧಿ ಬಗ್ಗೆ ಮಾತನಾಡಿ, ಬಡತನದ ಬಗ್ಗೆ ಗಮನಹರಿಸಿ ಮೋಹನ್ ಭಾಗವತ್ ಅವರ ‘ಹಿಂದೂ ರಾಷ್ಟ್ರ’ದ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, “ನಿಮ್ಮ ಮೇಲಿದ್ದ ಗೌರವವೇ ಬೇರೆ. ಆದರೆ ನೀವೂ ಕೂಡ ಯತ್ನಾಳ್, ಸಿ.ಟಿ. ರವಿ ಅವರ ಸಾಲಿಗೆ ಸೇರಿಕೊಂಡರೆ ಹೇಗೆ? ದೇಶದಲ್ಲಿ ಹಸಿವಿನ ಸೂಚ್ಯಂಕ ಎಲ್ಲಿದೆ ಎಂದು ನೋಡಿ. ನಿರುದ್ಯೋಗ ತಾಂಡವವಾಡುತ್ತಿದೆ.

ಬಡತನ ಹೆಚ್ಚುತ್ತಿದೆ. ಇವುಗಳ ಬಗ್ಗೆ ಮಾತನಾಡಿ. ಪಾಕಿಸ್ತಾನವನ್ನು ಹೇಗೆ ಬಗ್ಗುಬಡಿಯಬೇಕು, ದೇಶದ ಆಂತರಿಕ ಭದ್ರತೆಯನ್ನು ಹೇಗೆ ಬಲಪಡಿಸಬೇಕು ಎಂಬುದರ ಬಗ್ಗೆ ನಿಮ್ಮ ಚಿಂತನೆ ಹರಿಯಲಿ. ಅದನ್ನು ಬಿಟ್ಟು ಕೇವಲ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುವುದು ಸರಿಯಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶಭಕ್ತಿ ಎನ್ನುವುದು ಕೇವಲ ಹಿಂದೂಗಳ ಸ್ವತ್ತಲ್ಲ ದೇಶಭಕ್ತರು ಕೇವಲ ಒಂದೇ ಧರ್ಮಕ್ಕೆ ಸೀಮಿತವಲ್ಲ ಎಂದು ಪ್ರತಿಪಾದಿಸಿದ ಪ್ರದೀಪ್ ಈಶ್ವರ್, “ನೀವೇ ಅಬ್ದುಲ್ ಕಲಾಂ ಅವರನ್ನು ‘ನಿಜವಾದ ರಾಷ್ಟ್ರೀಯ ನಾಯಕ’ ಎಂದು ಕರೆದಿದ್ದೀರಿ. ಅವರು ಮುಸ್ಲಿಂ ಧರ್ಮದಲ್ಲಿ ಹುಟ್ಟಿದವರು. ದೇಶಭಕ್ತರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಹೀಗೆ ಎಲ್ಲಾ ಧರ್ಮಗಳಲ್ಲೂ ಇದ್ದಾರೆ,” ಎಂದು ನೆನಪಿಸಿದರು.

“ಪೂಜ್ಯ ಭಾವನೆ”ಯ ಸಮರ್ಥನೆ ಮೋಹನ್ ಭಾಗವತ್ ಅವರ ಮೇಲೆ “ಪೂಜ್ಯ ಭಾವನೆ” ಇತ್ತು ಎಂದಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರನ್ನು ಗೌರವಿಸುವುದು ನಮ್ಮ ಪದ್ಧತಿ. ನಾನು ಶ್ರೀರಾಮನನ್ನು, ಸಿದ್ದರಾಮಯ್ಯನವರನ್ನು, ಡಿ.ಕೆ. ಶಿವಕುಮಾರ್ ಅವರನ್ನು, ಅಲ್ಲಾ ಮತ್ತು ಏಸುವನ್ನು ಕೂಡ ಪೂಜ್ಯ ಭಾವನೆಯಿಂದಲೇ ನೋಡುತ್ತೇನೆ.

ಗೌರವಿಸುವುದು ನನ್ನ ಮಾತಿನ ಅರ್ಥ. ಆದರೆ, ಅವರು ಅಭಿವೃದ್ಧಿ ಮರೆತು ಮಾತನಾಡಿದರೆ, ಬೇರೆಯವರ ಸಾಲಿಗೆ ಸೇರುತ್ತಾರೆ,” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಒಟ್ಟಿನಲ್ಲಿ, ಪ್ರದೀಪ್ ಈಶ್ವರ್ ಅವರ ಈ ಸವಾಲು ಮತ್ತು ವಾಗ್ದಾಳಿ, ಆರ್‌ಎಸ್‌ಎಸ್‌ನ ಸಿದ್ಧಾಂತ ಮತ್ತು ಸಾಮಾಜಿಕ ಕೊಡುಗೆಗಳ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

Previous articleಕಾಲಿವುಡ್‌ನ ಜನಪ್ರಿಯ ನಟ ಅಭಿನಯ್‌ ಇನ್ನಿಲ್ಲ
Next articleಡೀಪ್‌ಫೇಕ್‌ ವಿಡಿಯೋ ಬಲೆಗೆ ಬಿದ್ದ ಗೃಹಿಣಿಗೆ 43 ಲಕ್ಷ ನಾಮ

LEAVE A REPLY

Please enter your comment!
Please enter your name here