ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ – ಸಿದ್ದರಾಮಯ್ಯ

0
133

ಬೆಂಗಳೂರು: ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮಕ್ಕೆ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪರಿಸರ, ಅರಣ್ಯ ಸಂರಕ್ಷಕರಿಗೆ ಮುಖ್ಯಮಂತ್ರಿಗಳ ಪದಕ ವಿತರಿಸಿ ಮಾತನಾಡಿ ಸಾಕಿದ ಹಸುವನ್ನು ಹುಲಿ ತಿಂದಿದೆ ಎನ್ನುವ ಕಾರಣಕ್ಕೆ ಹುಲಿಗಳಿಗೆ ವಿಷ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ. ಯಾರೇ ಅರಣ್ಯ ಮತ್ತು ಪ್ರಾಣಿ ಸಂಪತ್ತನ್ನು ಕೊಲ್ಲಲು ಮುಂದಾದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಅವರು ಎಷ್ಟೇ ದೊಡ್ಡವರಾಗಿದ್ದರೂ ಮುಲಾಜು ನೋಡದೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಾನವ-ವನ್ಯಜೀವಿ ಸಹಬಾಳ್ವೆಯ ಪರಿಸರ ಪೂರಕವಾದ ಆಶಯಕ್ಕಾಗಿ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಅರಣ್ಯ ಪರಿಸರ ಆರೋಗ್ಯಕರವಾಗಿ ವಿಸ್ತರಣೆ ಆದಷ್ಟೂ ಮನುಷ್ಯ ಪರಿಸರ ಹೆಚ್ಚು ಆರೋಗ್ಯಕರವಾಗಿರುತ್ತದೆ. ಅರಣ್ಯದ ಉಳಿವು ಭೂಮಿಯ ಉಳಿವು ಎನ್ನುವುದನ್ನು ಮರೆಯಬಾರದು.

ಆನೆ ಮತ್ತು ಹುಲಿ ಸಂಪತ್ತಿನಲ್ಲಿ ನಮ್ಮ ರಾಜ್ಯ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ. ಇದರ ಜೊತೆಗೆ ಪ್ರಾಣಿ ಮತ್ತು ಮನುಷ್ಯರ ಸಂಘರ್ಷ ತಪ್ಪಿ ಸಹಬಾಳ್ವೆ ಏರ್ಪಡಬೇಕು. ಇದಕ್ಕಾಗಿ ಪ್ರಾಣಿಗಳು ಕಾಡು ಬಿಟ್ಟು ಹೊರಗೆ ಏಕೆ ಬರುತ್ತಿವೆ ಎನ್ನುವ ಬಗ್ಗೆ ಅಧ್ಯಯನಗಳು ನಡೆದು ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ.

ಹುಲಿ, ಆನೆಗಳ ಹತ್ಯೆ ಅತ್ಯಂತ ಗಂಭೀರ ಅಪರಾಧಗಳು. ಅರಣ್ಯಾಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಹುಲಿ ಹತ್ಯೆ ಮಾಡಿದವರು ಮತ್ತು ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ.

ದಿನೇ ದಿನೇ ಅರಣ್ಯ ಪ್ರದೇಶ ಕಡಿಮೆ ಆಗುತ್ತಿದ್ದರೆ ಮನುಷ್ಯ ಕುಲ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಅರಣ್ಯದ ಉಳಿವು ಮನುಷ್ಯನ ಉಳಿವು ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದರು.

Previous articleಹಾಸನ: ಕಾಡಾನೆ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಒತ್ತಾಯ
Next articleನೊಬೆಲ್ 2025: ರಸಾಯನಶಾಸ್ತ್ರದ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ

LEAVE A REPLY

Please enter your comment!
Please enter your name here