ಕೋಗಿಲು ಬಡಾವಣೆ ಪ್ರಕರಣ: BJP ಸತ್ಯಶೋಧನಾ ಸಮಿತಿ ವರದಿ ಸಲ್ಲಿಕೆ

0
3

ಸ್ಥಳ ಪರಿಶೀಲನೆ, ಸರ್ವೇ ನಂಬರ್, ಕಾನೂನು ಅಂಶಗಳೊಂದಿಗೆ ಸಮಗ್ರ ಮಾಹಿತಿ ಸಂಗ್ರಹ – ಬಿ.ವೈ. ವಿಜಯೇಂದ್ರ

ಬೆಂಗಳೂರು: ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದ ಕೋಗಿಲು ಬಡಾವಣೆಯಲ್ಲಿ ಅಕ್ರಮ ವಲಸಿಗರ ಮನೆಗಳ ತೆರವು ವಿಚಾರಕ್ಕೆ ಸಂಬಂಧಿಸಿ ರಚಿಸಲಾಗಿದ್ದ ಭಾರತೀಯ ಜನತಾ ಪಕ್ಷದ ಸತ್ಯಶೋಧನಾ ಸಮಿತಿಯ ವರದಿಯನ್ನು ಇಂದು ಸ್ವೀಕರಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಪಕ್ಷದ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನೇತೃತ್ವದ ಸತ್ಯಶೋಧನಾ ತಂಡ ಸ್ಥಳಕ್ಕೆ ಭೇಟಿ ನೀಡಿ, ವ್ಯಾಪಕ ಪರಿಶೀಲನೆ ನಡೆಸಿ ಸಮಗ್ರ ವರದಿಯನ್ನು ಸಲ್ಲಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಐದು ನಗರ ಪಾಲಿಕೆಗಳ ಚುನಾವಣೆಗೆ ದಿನಾಂಕ ಫಿಕ್ಸ್‌

ಸ್ಥಳ ಪರಿಶೀಲನೆ ನಡೆಸಿದ ಸತ್ಯಶೋಧನಾ ತಂಡ: ಕೋಗಿಲು ಬಡಾವಣೆಯಲ್ಲಿ ನಡೆದ ಅಕ್ರಮ ವಸತಿ ತೆರವು ವಿಚಾರದಲ್ಲಿ ಉಂಟಾಗಿರುವ ಗೊಂದಲ, ಆರೋಪ–ಪ್ರತ್ಯಾರೋಪಗಳ ಹಿನ್ನೆಲೆಯಲ್ಲಿ ಬಿಜೆಪಿ ಈ ಸತ್ಯಶೋಧನಾ ಸಮಿತಿಯನ್ನು ರಚಿಸಿತ್ತು. ಸಮಿತಿಯು ಸ್ಥಳಕ್ಕೆ ನೇರ ಭೇಟಿ ನೀಡಿ ಅಲ್ಲಿನ ಜಾಗದ ಸಂಪೂರ್ಣ ವಿವರಗಳು ಹಾಗೂ ಸರ್ವೇ ನಂಬರ್ ಮಾಹಿತಿ, ಗೂಗಲ್ ಮ್ಯಾಪ್ ಆಧಾರಿತ ದಾಖಲೆಗಳು, ಅನ್ವಯವಾಗುವ ಕಾನೂನು ಹಾಗೂ ನಿಯಮಾವಳಿಗಳು ಇವೆಲ್ಲವನ್ನೂ ಸಂಗ್ರಹಿಸಿ ವಿಸ್ತೃತ ಹಾಗೂ ದಾಖಲೆ ಆಧಾರಿತ ವರದಿಯನ್ನು ತಯಾರಿಸಿದೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಕಾನೂನುಬದ್ಧತೆ ಪರಿಶೀಲನೆಗೆ ಒತ್ತು: ಸಮಿತಿ ಸಲ್ಲಿಸಿರುವ ವರದಿ ಕೇವಲ ರಾಜಕೀಯ ನಿಲುವಿಗೆ ಸೀಮಿತವಾಗದೇ, ಭೂಮಿಯ ಸ್ವರೂಪ, ಮಾಲೀಕತ್ವ, ಅಕ್ರಮ ವಸತಿ ನಿರ್ಮಾಣದ ಹಿನ್ನಲೆ ಮತ್ತು ಕಾನೂನು ಪ್ರಕ್ರಿಯೆಗಳ ವಿವರಗಳನ್ನು ಒಳಗೊಂಡಿದೆ 108 ಪುಟಗಳ ವರದಿಯಲ್ಲಿ ಪ್ರಮುಖ ಐದು ಶಿಫಾರಸು ಮಾಡಿದ್ದು ಪ್ರಕರಣದ ತನಿಖೆಯನ್ನು ಎನ್‌ಐಎ ಗೆ ನೀಡುವಂತೆ ಆಗ್ರಹಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ:  PSLV-C62 ಉಡಾವಣೆ: PS3ಯ ಕೊನೆಯ ಹಂತದಲ್ಲಿ ಅಡಚಣೆ

ಈ ವರದಿಯ ಆಧಾರದಲ್ಲಿ ಮುಂದಿನ ಹಂತದ ರಾಜಕೀಯ ಹಾಗೂ ಕಾನೂನು ಕ್ರಮಗಳ ಕುರಿತು ಪಕ್ಷ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ.

ರಾಜಕೀಯ ವಲಯದಲ್ಲಿ ಕುತೂಹಲ: ಕೋಗಿಲು ಬಡಾವಣೆಯ ಅಕ್ರಮ ವಸತಿ ತೆರವು ವಿಚಾರ ಈಗಾಗಲೇ ನಗರ ರಾಜಕಾರಣದಲ್ಲಿ ಚರ್ಚೆಯ ವಿಷಯವಾಗಿದ್ದು, ಬಿಜೆಪಿ ಸಲ್ಲಿಸಿರುವ ಈ ಸತ್ಯಶೋಧನಾ ವರದಿ ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಆಡಳಿತ ಯಂತ್ರದ ಮೇಲೆ ಒತ್ತಡ ಹೆಚ್ಚಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

Previous articleವಿಜಯಪುರದಲ್ಲಿ ಮೈಸೂರು ಸ್ಯಾಂಡಲ್ ಸಾಬೂನು ಮೇಳ