Darshan Thoogudeepa. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ-2 ಕನ್ನಡ ನಟ ದರ್ಶನ್‌ಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಕೋರ್ಟ್ ಒಪ್ಪಿಗೆ ನೀಡಿಲ್ಲ.
ಜೈಲಿನಲ್ಲಿರುವ ದರ್ಶನ್ ಹೆಚ್ಚುವರಿ ಹಾಸಿಗೆ, ದಿಂಬು ನೀಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಿದೆ.
ಬಳ್ಳಾರಿಗೆ ಸ್ಥಳಾಂತರವಿಲ್ಲ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಬಾರಿಗೆ ಜೈಲು ಸೇರಿದ್ದ ದರ್ಶನ್ ಬೆಂಗಳೂರಿನ ಜೈಲಿನ ರಾಜಾತಿಥ್ಯ ವಿವಾದದ ಬಳಿಕ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿದ್ದರು.
ಆದರೆ ಈಗ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದ ಬಳಿಕ ಅವರನ್ನು ಬಂಧಿಸಿ ಬೆಂಗಳೂರಿನ ಜೈಲಿಗೆ ಕಳಿಸಲಾಗಿದೆ. ಆದರೆ ಅವರನ್ನು ಪುನಃ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಬೇಕು ಎಂದು ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಕೆ ಮಾಡಿತ್ತು.
ಕೋರ್ಟ್ ತನ್ನ ತೀರ್ಪಿನಲ್ಲಿ ದರ್ಶನ್‌ರನ್ನು ಸದ್ಯ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಯಾವುದೇ ಸಕಾರಣಗಳು ಇಲ್ಲ. ಅವರು ಜೈಲಿನ ಕೈಪಿಡಿಯಂತೆ ನಿಯಮಗಳನ್ನು ಅನುಸರಿಸಬೇಕು. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಬೇರೆ ಜೈಲಿಗೆ ಸ್ಥಳಾಂತರ ಮಾಡುವ ಕುರಿತು ಜೈಲಿನ ಅಧಿಕಾರಿಗಳು ತೀರ್ಮಾನ ಕೈಗೊಳ್ಳಬಹುದು ಎಂದು ಹೇಳಿದೆ.
ಅಲ್ಲದೇ ನಟ ದರ್ಶನ್ ಬೇಡಿಕೆಯಂತೆ ಜೈಲಿನಲ್ಲಿ ಹಾಸಿಗೆ, ದಿಂಬು ನೀಡಲು ಕೋರ್ಟ್ ಅನುಮತಿ ನೀಡಿದೆ. ಅಲ್ಲದೇ ಜೈಲಿನ ಆವರಣದಲ್ಲಿ ದರ್ಶನ್ ಓಡಾಡಲು ಅನುಮತಿ ನೀಡುವಂತೆ ಕೋರ್ಟ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಒಂದು ವೇಳೆ ಜೈಲಿನ ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ದರ್ಶನ್ ಪರ ವಕೀಲರಿಗೆ ಕೋರ್ಟ್ ಎಚ್ಚರಿಕೆಯನ್ನು ನೀಡಿದೆ. ಆದ್ದರಿಂದ ದರ್ಶನ್ ಜೈಲಿನ ನಿಯಮಗಳನ್ನು ಪಾಲನೆ ಮಾಡಿಕೊಂಡು ಬೆಂಗಳೂರಿನ ಜೈಲಿನಲ್ಲಿಯೇ ಇರಬೇಕಿದೆ.
ಈ ಹಿಂದೆ ಬಳ್ಳಾರಿ ಜೈಲಿನಲ್ಲಿದ್ದಾಗ ದರ್ಶನ್ ಸಾಕಷ್ಟು ಹಿಂಸೆ ಅನುಭವಿಸಿದ್ದರು. ದರ್ಶನ್ ನೋಡಲು ಆತನ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಪರ ವಕೀಲರು ಪ್ರತಿ ಬಾರಿ ಬಳ್ಳಾರಿಗೆ ಹೋಗಬೇಕಿತ್ತು. ಆದರೆ ಈ ಬಾರಿ ದರ್ಶನ್ ಬೆಂಗಳೂರಿನ ಜೈಲಿನಲ್ಲಿಯೇ ಇರಲಿದ್ದಾರೆ.
ಸುಪ್ರೀಂಕೋರ್ಟ್ ದರ್ಶನ್ ಜಾಮೀನು ರದ್ದು ಮಾಡುವಾಗ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಕುರಿತು ಆಕ್ಷೇಪ ವ್ಯಕ್ತಪಡಿಸಿತ್ತು. ಇನ್ನು ಮುಂದೆ ಈ ಮಾದರಿ ಘಟನೆ ಕಂಡುಬಂದರೆ ಜೈಲಿನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ಕೊಟ್ಟಿತ್ತು.