ಬೆಂಗಳೂರು: ಸಮರ್ಪಣ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದ್ದು, 5 ದಿನಗಳ ಉತ್ಸವದ ಮೂಲಕ ಕನ್ನಡಿಗರ ಜೊತೆಗೆ ಅನ್ಯ ರಾಜ್ಯದ ಜನತೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಅಕ್ಟೋಬರ್ 31ರಿಂದ ನವೆಂಬರ್ 4ರವರೆಗೆ ನಡೆಯಲಿರುವ ಈ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ಕನ್ನಡ ಉತ್ಸವ ಹೆಸರಿನಡಿ ಮಾಡಲಾಗುತ್ತಿದೆ.
ಸಮರ್ಪಣ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ (ನೋಂದಾಯಿತ) ಕಳೆದ ಮೂರು ವರ್ಷಗಳಿಂದಲೂ ರಾಜ್ಯದಾದ್ಯಂತ ಅನೇಕ ಕಡೆ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ, ಪರಿಸರದ ಬಗ್ಗೆ ಕಾಳಜಿ ಸಲುವಾಗಿ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಈ ಭಾಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ನಾಡಿನಾದ್ಯಂತ ಸಂಭ್ರಮಿಸುವುದು ಒಂದು ಕಡೆ ಆದರೆ ನಮ್ಮ ಬಸವನಗುಡಿ ನ್ಯಾಷನಲ್ ಕಾಲೇಜ್ ಆಟದ ಮೈದಾನದಲ್ಲಿ ಆಚರಿಸುವ ʼಕನ್ನಡ ಉತ್ಸವ’ ಮತ್ತೊಂದು ಕಡೆ.
ಏಕೆಂದರೆ, ನಮ್ಮ ಬೆಂಗಳೂರಿನಲ್ಲಿ ನೆರೆದಿದ್ದಂತಹ ಬೇರೆ ರಾಜ್ಯದವರಿಗೆ ನಮ್ಮ ಕನ್ನಡದ ಮಣ್ಣಿನ ಕಥೆ ಕರ್ನಾಟಕದ ಸಂಪ್ರದಾಯ ಸಂಸ್ಕೃತಿ, ಇತಿಹಾಸ ನಮ್ಮ ಇಮ್ಮಡಿ ಪುಲಿಕೇಶಿ, ಕನ್ನಡ ಪರ ಚಿಂತಕರಾದ ಸಾಹಿತಿಗಳು, ರಚನಾಕಾರರು ಪರಿಚಯಿಸಿಕೊಡುವುದು.
ಈ ಕಾರ್ಯಕ್ರಮಕ್ಕೆ ಅನೇಕ ಕನ್ನಡ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಹಾಗೂ ಚಲನಚಿತ್ರ ನಟರ ಆಗಮನ ಅನೇಕ ಗಣ್ಯರು ಹಾಗೂ ಮ್ಯಾಜಿಕ್ ಶೋ, ನೇರ ಪ್ರದರ್ಶನ, ರಸಮಂಜರಿ ಕಾರ್ಯಕ್ರಮ, ಭರತನಾಟ್ಯ, ಯಕ್ಷಗಾನ ಇನ್ನು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ವಿಶೇಷತೆ ಎಂದರೆ 35 ಅಡಿಗಳ ಎತ್ತರದ ಇಮ್ಮಡಿ ಪುಲಿಕೇಶಿ ಅವರ ಕಟೌಟ್ ಹಾಗೂ ವಿಲಕ್ಷಣ ಪ್ರಾಣಿ ಪಕ್ಷಿಗಳ ಪ್ರದರ್ಶನದ ಜೊತೆಗೆ ಆರ್ಟಿಫಿಶಿಯಲ್ ಜೋಗ್ ಜಲಪಾತ ಸೇರಿದಂತೆ ಬಂದ ಜನರಿಗೆ ಶುದ್ಧವಾದ ಕನ್ನಡ ವಾತಾವರಣ ಸೃಷ್ಟಿಸುವುದಾಗಿದೆ. ಈ ರಾಜ್ಯೋತ್ಸವವನ್ನು ಸಚಿವರಾದ ರಾಮಲಿಂಗ ರೆಡ್ಡಿ, ಸಂಸದರಾದ ತೇಜಸ್ವಿ ಸೂರ್ಯ, ಶಾಸಕರಾದ ಉದಯ್ ಗರುಡಾಚಾರ್ ಅವರು ಬಂದು ಉದ್ಘಾಟಿಸಲಿದ್ದು, ಈ 5 ದಿನಗಳ ಕಾಲ ಸಾರ್ವಜನಿಕರು ಉಚಿತವಾಗಿ ಭೇಟಿ ನೀಡಬಹುದು.
























