ಗ್ರೇಟರ್ ಬೆಂಗಳೂರು ಎಂದು ಹಣೆಪಟ್ಟಿಕಟ್ಟಿಕೊಳ್ಳುತಿರುವ ರಾಜಧಾನಿ ಬೆಂಗಳೂರು ಈಗ ರಸ್ತೆ ಗುಂಡಿ ಕೆಸರೆರಚಾಟಕ್ಕೆ ಕಾರಣವಾಗಿದೆ. ರಸ್ತೆ ಅವ್ಯವಸ್ಥೆ ತಾಳಲಾರದೆ ನವೋದ್ಯಮವೊಂದು ನಗರವನ್ನು ಬಿಟ್ಟು ಹೋಗುವುದಾಗಿ ಬೆದರಿಸಿದರೆ, ಇಲ್ಲಿನ ಅವ್ಯವಸ್ಥೆಗೆ ಉದ್ಯಮಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಸ್ತೆ ಗುಂಡಿಗಳನ್ನು ಕಾಲಮಿತಿಯೊಳಗೆ ಸರಿಪಡಿಸುವು ದಾಗಿ ಹೇಳಿದ್ದಾರೆ. ಆದರೆ ರಾಜ್ಯ ಸರ್ಕಾರದ ಪರಿಸ್ಥಿತಿಯನ್ನು ಅಣಕಿಸುವಂಥ ಚಿತ್ರವನ್ನು ಬಿಜೆಪಿ ಪೋಸ್ಟ್ ಮಾಡಿದೆ. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ನಾವು ಹೋಗ್ತಿವಿ: “ಕಳೆದ 9 ವರ್ಷಗಳಿಂದ ಬೆಳ್ಳಂದೂರು ನಮ್ಮ ಕಚೇರಿ ಮತ್ತು ಮನೆಯಾಗಿದೆ. ನನ್ನ ಸಹೋದ್ಯೋಗಿಗಳು ಕಚೇರಿಗೆ ಬರಲು ಕನಿಷ್ಠ 1.5 ಗಂಟೆ ಬೇಕಾಗುತ್ತದೆ. ರಸ್ತೆಗಳು ಗುಂಡಿಗಳು ಮತ್ತು ಧೂಳಿನಿಂದ ತುಂಬಿ ಹೋಗಿದೆ. ಇನ್ನೈದು ವರ್ಷವಾದರೂ ಬದಲಾಗುವ ಸಾಧ್ಯತೆ ಕಾಣಿಸುತ್ತಿಲ್ಲ. ಹೀಗಾಗಿ ನಾವು ಕಂಪನಿ ಸ್ಥಳಾಂತರಕ್ಕೆ ನಿರ್ಧರಿಸಿದ್ದೇವೆ.” ಎಂದು ಬ್ಲಾಕ್ ಬಕ್ ಸಿಇಒ ರಾಜೇಶ್ ಯಾಬಾಜಿ ಟ್ವಿಟ್ ಮೂಲಕ ತಿಳಿಸಿದ್ದಾರೆ.
ರಸ್ತೆ ಗುಂಡಿಗಳ ವಿರುದ್ಧ ಬ್ಲಾಕ್ ಬಕ್ ಕಂಪನಿ ಕೋ ಫೌಂಡರ್ ಮತ್ತು ಸಿಇಒ ರಾಜೇಶ್ ಯಾಬಾಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬುಧವಾರ ಟ್ವಿಟ್ ಮಾಡಿ, ಕಳೆದ 9 ವರ್ಷಗಳಿಂದ ಬೆಳ್ಳಂದೂರು ನಮ್ಮ ಕಚೇರಿ ಮತ್ತು ಮನೆಯಾಗಿದೆ. ಆದರೆ ಈಗ ಇಲ್ಲಿ ಮುಂದುವರಿಯುವುದು ತುಂಬಾ ಕಷ್ಟ. ಒಂದು ಕಡೆಯಿಂದ ಪ್ರಯಾಣ ಮಾಡಲು ಕನಿಷ್ಠ 90 ನಿಮಿಷ ಸಮಯ ಬೇಕು. ಕಳೆದ 5 ವರ್ಷದಿಂದ ಈ ಭಾಗದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ರಸ್ತೆಗಳು ಗುಂಡಿಗಳು ಮತ್ತು ಧೂಳಿನಿಂದ ತುಂಬಿ ಹೋಗಿದೆ. ಹೀಗಾಗಿ ನಾವು ಕಂಪನಿ ಸ್ಥಳಾಂತರಕ್ಕೆ ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ಉದ್ಯಮಿ ಮೋಹನದಾಸ್ ಪೈ, ಬಯೋಕಾನ್‌ನ ಕಿರಣ ಷಾ ಮಜಮದಾರ್ ಸಹ ದನಿಗೂಡಿಸಿದ್ದಾರೆ. ಬೆಂಗಳೂರಿನಲ್ಲಿ ಆಡಳಿತ ವೈಫಲ್ಯ ಆಗಿದೆ. ಹಲವು ಕಂಪನಿಗಳ ಸಿಐಒಗಳು ಹೊರಹೋಗುತ್ತಿದ್ದಾರೆ. ಬೆಂಗಳೂರಿನ ಔಟರ್‌ರಿಂಗ್ ರಸ್ತೆಗಳಲ್ಲಿ ಪರಿಸ್ಥಿತಿ ಕೆಟ್ಟದಾಗಿದ್ದು, ದಯವಿಟ್ಟು ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿ ಟ್ವಿಟ್ ಮಾಡಿದ್ದಾರೆ.
ಇನ್ನು ಶಾಲಾಮಕ್ಕಳು ಕವನದ ಮೂಲಕ ‘ನಮ್ಮ ಕಣ್ಣಿಗೆ ಕಂಡಲ್ಲೆಲ್ಲ ಗುಂಡಿಗಳು, ಹೊಂಡಗಳು, ಕಲ್ಲು ಮತ್ತು ಮಣ್ಣು. ನನ್ನ ತಂದೆ ತೆರಿಗೆ ಪಾವತಿಸುತ್ತಾರೆ. ನಾವು ಪೆಟ್ರೋಲ್, ಕೇಕ್, ನೀರು, ವಿದ್ಯುತ್‌ಗೆ ತೆರಿಗೆ ಪಾವತಿಸುತ್ತೇವೆ ಆದರೂ ನಮ್ಮ ರಸ್ತೆಗಳು ಹೀಗೇಕೆ ಎಂದು ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಪ್ರಶ್ನಿಸಿದ್ದಾರೆ.
* ಬ್ಲಾಕ್ ಬಕ್ ಕಂಪನಿ ಸಿಇಓ ರಾಜೇಶ್ ಯಾಬಾಜಿ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಆಂಧ್ರದ ಐಟಿ ಸಚಿವ ನಾರಾ ಲೋಕೇಶ್, ವಿಶಾಖಪಟ್ಟಣಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
* ಡಿಸಿಎಂರಸ್ತೆ ಗುಂಡಿಯ ವಿಷಯ ವಿವಾದವಾಗುತ್ತಿದ್ದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನವೆಂಬರ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚು ವಂತೆ ಗುತ್ತಿಗೆದಾರರಿಗೆ ಗಡುವು ನೀಡಿದ್ದಾರೆ.
* ಸ್ಟಾರ್ಟಪ್ ಕಂಪನಿಗಳು ಬೆಂಗಳೂರನ್ನು ಬಿಟ್ಟು ಹೋಗಲು ಡಿ.ಕೆ.ಶಿವಕುಮಾರ್ ಸೂಚಿಸುತ್ತಿರುವ ವ್ಯಂಗ್ಯಚಿತ್ರ ಪೋಸ್ಟ್ ಮಾಡಿ ಬಿಜೆಪಿ ಅಣಕಿಸಿದೆ.
ಈ ಬಗ್ಗೆ ಅನೇಕ ಉದ್ಯಮಿಗಳು, ನಾಗರಿಕರು ಹಾಗೂ ಹೋರಾಟಗಾರರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಗಳಲ್ಲಿ ಟ್ವಿಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದರೇ ಕೆಲವು ಕಂಪನಿಗಳು ರಸ್ತೆ ದುರಸ್ತಿ ಮಾಡದಿದ್ದರೇ ಬೆಂಗಳೂರು ತೊರೆದು ಪಕ್ಕದ ರಾಜ್ಯಗಳಿಗೆ ಹೊರಡುವುದಾಗಿ ಎಚ್ಚರಿಕೆ ನೀಡಿವೆ.