
ಹೊಸ ವರ್ಷದ ಸಂಭ್ರಮಕ್ಕೆ ಅಡಚಣೆ ಆಗದಂತೆ ಸಿದ್ಧತೆಗಳ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಸಂಯುಕ್ತ ಕರ್ನಾಟಕ ಪತ್ರಿಕೆ ಹಾಗೂ ಡಿಜಿಟಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರಿಸಿದ್ದಾರೆ. (ಪೂರ್ತಿ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ)
ಸಂ.ಕ. ಸಮಾಚಾರ, ಬೆಂಗಳೂರು: ಹೊಸ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರು ನಗರ ಹೊಸವರ್ಷವನ್ನು ಸ್ವಾಗತಿಸಲು ಸಜ್ಜಾಗಿದೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ಪ್ರಮುಖ ಕೇಂದ್ರಗಳಲ್ಲಿ ಯುವಕ–ಯುವತಿಯರ ಸಂಭ್ರಮಾಚರಣೆಗೆ ಭಾರೀ ಸಿದ್ಧತೆ ನಡೆಯುತ್ತಿದೆ. ಆದರೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬೆಂಗಳೂರು ನಗರ ಪೊಲೀಸ್ ಇಲಾಖೆ ಈ ಬಾರಿ ಅತ್ಯಾಧುನಿಕ ಹಾಗೂ ಹೈಟೆಕ್ ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಹೊಸ ವರ್ಷಾಚರಣೆಗೆ ನಗರಾದ್ಯಂತ 20 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಎಐ ತಂತ್ರಜ್ಞಾನ ಆಧಾರಿತ ಕ್ಯಾಮೆರಾಗಳು, ಡ್ರೋನ್ ನಿಗಾವ್ಯವಸ್ಥೆ, ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನ ಹಾಗೂ ಹೀಟ್ ಮ್ಯಾಪ್ ವ್ಯವಸ್ಥೆಗಳ ಮೂಲಕ ಜನಸಂದಣಿ ಮತ್ತು ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.
10 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ: ಈ ಬಾರಿ ಹೊಸ ವರ್ಷದ ಸಂಭ್ರಮಾಚರಣೆ ದೊಡ್ಡ ಮಟ್ಟದಲ್ಲಿದ್ದು, ನಗರದಾದ್ಯಂತ 10 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ. ಕೇವಲ ಎಂ.ಜಿ. ರಸ್ತೆಯಲ್ಲೇ ಸುಮಾರು 4 ಲಕ್ಷಕ್ಕೂ ಅಧಿಕ ಜನ ಸೇರುವ ಸಾಧ್ಯತೆ ಇದೆ ಎಂದು ಆಯುಕ್ತರು ತಿಳಿಸಿದರು. ಕಳೆದ ನಾಲ್ಕು ವಾರಗಳಿಂದಲೇ ಪೂರ್ವಭಾವಿ ಸಿದ್ಧತೆ ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ನಾಲ್ಕು ವಾರಗಳಿಂದಲೇ ಪೂರ್ವಭಾವಿ ಸಿದ್ಧತೆ: ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಮಹಿಳಾ ಸುರಕ್ಷತೆಗೆ ವಿಶೇಷ ಒತ್ತು: ಮಹಿಳೆಯರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, 164 ಮಹಿಳಾ ಸಹಾಯ ಕೇಂದ್ರಗಳು (Women Help Desk & Shelter) ಸ್ಥಾಪಿಸಲಾಗಿದೆ. ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಕೆಎಸ್‌ಆರ್‌ಪಿ ಮಹಿಳಾ ಪ್ಲಾಟೂನ್‌ಗಳನ್ನು ನಿಯೋಜಿಸಲಾಗಿದೆ. ಪಬ್ ಹಾಗೂ ಕ್ಲಬ್‌ಗಳಲ್ಲಿ ಮಹಿಳಾ ಬೌನ್ಸರ್‌ಗಳನ್ನು ಕಡ್ಡಾಯಗೊಳಿಸಲಾಗಿದೆ.
ಮಹಿಳಾ ಸುರಕ್ಷತೆಗೆ ವಿಶೇಷ ಒತ್ತು: ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ನಗರದ ಪ್ರಮುಖ ಪ್ರದೇಶಗಳಲ್ಲಿ ಎಐ ಆಧಾರಿತ ಫೇಶಿಯಲ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಅಳವಡಿಸಿದ್ದು, ರೌಡಿಗಳು ಅಥವಾ ಹಳೆ ಅಪರಾಧಿಗಳನ್ನು ಕ್ಷಣಾರ್ಧದಲ್ಲಿ ಗುರುತಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ, ಮಹಿಳೆಯರ ತುರ್ತು ಸಹಾಯಕ್ಕಾಗಿ 64 ಹೆಲ್ತ್ ಡೆಸ್ಕ್‌ಗಳನ್ನು ಸ್ಥಾಪಿಸಲಾಗಿದೆ.
ಕ್ಯೂಆರ್ ಕೋಡ್ ಮೂಲಕ ಸಾರ್ವಜನಿಕರಿಗೆ ನೆರವು: ಸಾರ್ವಜನಿಕರಿಗೆ ತ್ವರಿತ ನೆರವು ಒದಗಿಸಲು ಈ ಬಾರಿ ವಿಶೇಷ QR ಕೋಡ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಹತ್ತಿರದ ಆಂಬ್ಯುಲೆನ್ಸ್, ಮಹಿಳಾ ಶೆಲ್ಟರ್, ಕ್ಯಾಬ್ ಸೇವೆಗಳ ಮಾಹಿತಿ ತಕ್ಷಣ ಲಭ್ಯವಾಗಲಿದೆ. ಜನಸಂದಣಿಯ ಪ್ರಮಾಣವನ್ನು ಅಳೆಯಲು ಹೀಟ್ ಮ್ಯಾಪ್ ಮತ್ತು ಡ್ರೋನ್ ನಿಗಾ ವ್ಯವಸ್ಥೆ ಬಳಸಲಾಗುತ್ತಿದೆ.
ಡ್ರಗ್ಸ್ ವಿರುದ್ಧ ಕಠಿಣ ಕ್ರಮ: ಹೊಸ ವರ್ಷದ ಆಚರಣೆಯ ವೇಳೆ ಡ್ರಗ್ಸ್ ಹಾವಳಿ ತಡೆಯಲು ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವರ್ಷ 180 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ, ಇದು ಇದುವರೆಗಿನ ದಾಖಲೆಯಾಗಿದೆ. ಡ್ರಗ್ಸ್ ಮಾರಾಟ ಅಥವಾ ಸಾಗಾಟದ ಕುರಿತು ಸಾರ್ವಜನಿಕರಿಗೆ ಮಾಹಿತಿ ಇದ್ದರೆ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ. ಪಾರ್ಸೆಲ್ ಸೇವೆಗಳ ಮೂಲಕ ಡ್ರಗ್ಸ್ ಸಾಗಾಟದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬೆಂಗಳೂರಲ್ಲಿ ʼಡ್ರಗ್ಸ್ ಫ್ಯಾಕ್ಟರಿʼ? ಕಮಿಷನರ್ ಬಿಚ್ಚಿಟ್ಟ ಸತ್ಯವೇನು? ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಸಾರಿಗೆ ವ್ಯವಸ್ಥೆ ವಿಸ್ತರಣೆ: ಹೊಸ ವರ್ಷದ ಸಂಭ್ರಮಾಚರಣೆ ಬಳಿಕ ಸಾರ್ವಜನಿಕರು ಸುರಕ್ಷಿತವಾಗಿ ಮನೆ ತಲುಪಲು ಮೆಟ್ರೋ ಸೇವೆಯನ್ನು ರಾತ್ರಿ 3 ಗಂಟೆಯವರೆಗೆ ವಿಸ್ತರಿಸಲಾಗಿದೆ. ಮೆಟ್ರೋ ರೈಲುಗಳು ಪ್ರತಿ 8 ನಿಮಿಷಕ್ಕೊಮ್ಮೆ ಸಂಚರಿಸಲಿವೆ. ಬಿಎಂಟಿಸಿಯಿಂದ 150ಕ್ಕೂ ಹೆಚ್ಚು ಹೆಚ್ಚುವರಿ ಬಸ್ ಹಾಗೂ ಟೆಂಪೋ ಟ್ರಾವೆಲರ್‌ಗಳ ವ್ಯವಸ್ಥೆ ಮಾಡಲಾಗಿದೆ. ಆಟೋ ಮತ್ತು ಕ್ಯಾಬ್ ಚಾಲಕರೊಂದಿಗೆ ಸಹ ಮಾತುಕತೆ ನಡೆಸಲಾಗಿದೆ.
ನಮ್ಮ ಮೆಟ್ರೋ ಮಿಡ್ ನೈಟ್‌ವರೆಗೆ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಕೊನೆಯಲ್ಲಿ, ಶಾಂತವಾಗಿ ಮತ್ತು ಸಂಯಮದಿಂದ ಹೊಸ ವರ್ಷವನ್ನು ಆಚರಿಸುವಂತೆ ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದು, ಎಲ್ಲರಿಗೂ ಹೊಸ ವರ್ಷ ಶುಭಕರವಾಗಲಿ ಎಂದು ಸಂದೇಶ ನೀಡಿದರು.





















