ಬೆಂಗಳೂರು: ಕರ್ನಾಟಕದ ಬಹು ವರ್ಷದ ಬೇಡಿಕೆಯಾದ ಬೆಂಗಳೂರು – ಮುಂಬೈ ಸೂಪರ್ ಫಾಸ್ಟ್ ರೈಲು ಸೇವೆಗೆ ಕೇಂದ್ರ ಸರ್ಕಾರ ಅಂತಿಮವಾಗಿ ಅನುಮೋದನೆ ನೀಡಿದೆ. ಈ ಮಹತ್ವದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕರ್ನಾಟಕ ರಾಜ್ಯದ ಪರವಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಕಳೆದ 30 ವರ್ಷಗಳಿಂದ ಕರ್ನಾಟಕದಿಂದ ನೇರವಾಗಿ ಮುಂಬೈಗೆ ಸಂಪರ್ಕ ಕಲ್ಪಿಸುವ ಇನ್ನೊಂದು ಸೂಪರ್ ಫಾಸ್ಟ್ ರೈಲು ಸೇವೆ ಅಗತ್ಯವಿದೆ ಎಂಬ ಜನರ ಆಶೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ,” ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ “ಉದ್ಯಾನ ಎಕ್ಸ್‌ಪ್ರೆಸ್” ರೈಲು ಮಾತ್ರ ಬೆಂಗಳೂರು – ಗುಂಟಕಲ್ – ಸೊಲ್ಲಾಪುರ ಮಾರ್ಗವಾಗಿ ಮುಂಬೈಗೆ ಸಂಚರಿಸುತ್ತಿದೆ. ಈಗ ಹೊಸದಾಗಿ ಅನುಮೋದನೆಗೊಂಡ ಸೂಪರ್ ಫಾಸ್ಟ್ ರೈಲು ತುಮಕೂರು – ದಾವಣಗೆರೆ – ಹಾವೇರಿ – ಹುಬ್ಬಳ್ಳಿ/ಧಾರವಾಡ – ಬೆಳಗಾವಿ ಮಾರ್ಗ ಮೂಲಕ ಸಂಚರಿಸಲಿದ್ದು, ಕರ್ನಾಟಕದ ಮಧ್ಯಭಾಗದ ಜನತೆಗೆ ನೇರ ಸಂಪರ್ಕ ಕಲ್ಪಿಸಲಿದೆ.
ಈ ರೈಲು ಪ್ರಾರಂಭಿಸಲು ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ಮತ್ತು ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ನಾಯಕರು ಕೇಂದ್ರ ಸರ್ಕಾರಕ್ಕೆ ವಿನಂತಿ ಸಲ್ಲಿಸಿದ್ದರು.
ಈ ವಿನಂತಿಗೆ ಸ್ಪಂದಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಹೊಸ ರೈಲಿಗೆ ಅನುಮೋದನೆ ನೀಡಿ ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಿಸಲಾಗುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ನಿನ್ನೆ ದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿಯಾಗಿ ಕರ್ನಾಟಕದ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಅವರು ಹೇಳಿದರು:
“ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿ ಮಾರ್ಗದಲ್ಲಿ ಸಂಚರಿಸುವ ಈ ರೈಲು ಕರ್ನಾಟಕದ ವಾಣಿಜ್ಯ, ಉದ್ಯೋಗ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೊಸ ಬಲ ತುಂಬಲಿದೆ.”
ಈ ನಿರ್ಧಾರದಿಂದ ಮಧ್ಯ ಮತ್ತು ಉತ್ತರ ಕರ್ನಾಟಕದ ಜನರಿಗೆ ಮುಂಬೈ ಸಂಪರ್ಕ ಸುಲಭವಾಗಲಿದ್ದು, ವ್ಯಾಪಾರ ಮತ್ತು ಉದ್ಯಮದ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.





















