Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು: ಶಾಕ್‌ಗೆ ತಾಯಿ ಆತ್ಮಹತ್ಯೆ

ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು: ಶಾಕ್‌ಗೆ ತಾಯಿ ಆತ್ಮಹತ್ಯೆ

0
124

ಬೆಂಗಳೂರು: ಬೆಂಗಳೂರು ನಗರದ ಚಂದ್ರಾ ಲೇಔಟ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ನೀರಿನ ಬಕೆಟ್‌ನಲ್ಲಿ ಮುಳುಗಿ ಮಗು ಸಾವನ್ನಪ್ಪಿದ ದುರ್ಘಟನೆಯನ್ನು ಕಂಡ ತಾಯಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಮಗುವನ್ನು ಅಗಸ್ತ್ಯ ಎಂದು ಗುರುತಿಸಲಾಗಿದ್ದು, ತಾಯಿ ಪ್ರತಿಭಾ (29) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಈ ಘಟನೆ ನಡೆದಿರುವುದು ತಿಳಿದುಬಂದಿದೆ.

ಘಟನೆ ವಿವರ : ಪ್ರತಿಭಾ ವರ್ಕ್ ಫ್ರಂ ಹೋಂ ಮಾಡುತ್ತಿದ್ದರು. ಗಂಡ ಮಹಂತೇಶ್ ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಮನೆಯ ಮೇಲ್ಚಾವಣಿಯಲ್ಲಿ ಒಣಹಾಕಿದ್ದ ಬಟ್ಟೆ ತರಲು ತೆರಳಿದ್ದ ವೇಳೆ, ಮಗು ಆಟವಾಡುತ್ತಾ ಬಚ್ಚಲು ಮನೆಗೆ ಹೋಗಿದ್ದು, ಅಲ್ಲಿದ್ದ ನೀರಿನ ಬಕೆಟ್‌ನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಡೆತ್ ನೋಟ್‌ನಲ್ಲಿ ತಾಯಿಯ ನೋವು : ಘಟನೆ ಬಳಿಕ ಪ್ರತಿಭಾ ಬರೆದಿಟ್ಟ ಡೆತ್ ನೋಟ್‌ನಲ್ಲಿ, “ನನ್ನ ಮಗುವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಇದರ ಹೊಣೆಗಾರಿಕೆ ನನ್ನದೇ” ಎಂದು ಹೇಳಿಕೊಂಡಿದ್ದಾರೆ. ಮೊದಲು ಮಾತ್ರೆ ನುಂಗಿ ಹಾಗೂ ಕೈ ಕತ್ತರಿಸಿ ಆತ್ಮಹತ್ಯೆಗೆ ಯತ್ನಿಸಿದರೂ ವಿಫಲವಾದ ಹಿನ್ನೆಲೆಯಲ್ಲಿ ಕೊನೆಗೆ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ಬೆಳಕಿಗೆ ಬಂದದ್ದು ಹೇಗೆ? : ರಾತ್ರಿ ಮನೆಗೆ ಬಂದ ಮಹಂತೇಶ್ ಬಾಗಿಲು ತೆರೆದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ಒಳಗೆ ತಾಯಿ ನೇಣಿಗೆ ಶರಣಾಗಿರುವುದು ಹಾಗೂ ಮಗು ಮೃತಪಟ್ಟಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಸ್ಥಳದಲ್ಲೇ ಡೆತ್ ನೋಟ್ ಹಾಗೂ ಖಾಲಿ ಮಾತ್ರೆ ಪ್ಯಾಕ್ ಕೂಡ ಪತ್ತೆಯಾಗಿದೆ.

ಪೊಲೀಸ್ ತನಿಖೆ : ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.