ರಾಜಕೀಯ ವಿವಾದಕ್ಕೆ ಕಾರಣವಾದ ದರ ಏರಿಕೆ: ಪ್ರಯಾಣಿಕರಿಗೆ ಸಿಗಲಿದೆ ತಾತ್ಕಾಲಿಕ ಲಾಭ
ಬೆಂಗಳೂರು: ದಿನದಿಂದ ದಿನಕ್ಕೆ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳಿಂದ ತತ್ತರಿಸಿರುವ ಬೆಂಗಳೂರಿಗರಿಗೆ, ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರದಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಫೆಬ್ರವರಿ 9ರಿಂದ ಜಾರಿಗೆ ಬರಬೇಕಿದ್ದ ಮೆಟ್ರೋ ಟಿಕೆಟ್ ದರ ಹೆಚ್ಚಳವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದು, ಕೇಂದ್ರ ಗೃಹ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ, ದರ ಏರಿಕೆಗೆ ತಡೆ ಒಡ್ಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳು ಏನ್ ಆಸೆ ಪಡ್ತಾರೋ ಅದರಲ್ಲಿ ತಪ್ಪಿಲ್ಲ: ಪಕ್ಷದ ತೀರ್ಮಾನವೇ ಅಂತಿಮ
ಕೇಂದ್ರ ಸಚಿವರೊಂದಿಗೆ ಚರ್ಚೆ: ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ತೇಜಸ್ವಿ ಸೂರ್ಯ,“ಫೆಬ್ರವರಿ 9ರಿಂದ ಮೆಟ್ರೋ ಟಿಕೆಟ್ ದರ ಹೆಚ್ಚಿಸದಂತೆ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ” ಎಂದು ತಿಳಿಸಿದ್ದಾರೆ. ಬೆಂಗಳೂರು ಈಗಾಗಲೇ ದೇಶದಲ್ಲೇ ದುಬಾರಿ ಮೆಟ್ರೋ ದರ ಹೊಂದಿರುವ ನಗರವಾಗಿದೆ. ಮತ್ತಷ್ಟು ಹೆಚ್ಚಳವಾದರೆ ಲಕ್ಷಾಂತರ ಪ್ರಯಾಣಿಕರಿಗೆ ಸಾರ್ವಜನಿಕ ಸಾರಿಗೆ ದುಬಾರಿಯಾಗುತ್ತದೆ ಎಂದು ಅವರು ಗಮನ ಸೆಳೆದಿದ್ದಾರೆ.
ಪ್ರಯಾಣಿಕರಿಗೆ ಸಿಗಲಿದೆ ತಾತ್ಕಾಲಿಕ ಲಾಭ: ತೇಜಸ್ವಿ ಸೂರ್ಯ ಅವರ ಪ್ರಕಾರ, ಪ್ರಸ್ತಾವಿತ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರಿಂದಾಗಿ ಸೋಮವಾರದಿಂದ ದರ ಏರಿಕೆ ಜಾರಿಗೆ ಬರುವುದಿಲ್ಲ. ಪ್ರಯಾಣಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಒತ್ತುವರಿ – ₹140 ಕೋಟಿ ಮೌಲ್ಯದ 7 ಎಕರೆ ಜಾಗ ವಶಕ್ಕೆ
ಬಿಎಂಆರ್‌ಸಿಎಲ್ ಪ್ರತಿಕ್ರಿಯೆ: ಇದಕ್ಕೆ ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳು, ಈ ವಿಚಾರದಲ್ಲಿ ಇನ್ನೂ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಅಧಿಕೃತ ಸೂಚನೆ ಬಂದಿಲ್ಲ ಎಂದು ಹೇಳಿದ್ದಾರೆ. ಸರ್ಕಾರದ ಸ್ಪಷ್ಟ ನಿರ್ದೇಶನ ಬಂದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ವಿವಾದಕ್ಕೆ ಕಾರಣವಾದ ದರ ಏರಿಕೆ: ಇತ್ತೀಚೆಗೆ ಬಿಎಂಆರ್‌ಸಿಎಲ್ ಮೆಟ್ರೋ ಪ್ರಯಾಣ ದರವನ್ನು ಶೇ. 5ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರದ ಅನುಮೋದನೆ ಪಡೆದಿತ್ತು. ನಿರ್ವಹಣಾ ವೆಚ್ಚ ಹೆಚ್ಚಳ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿತ್ತು. ಆದರೆ ಈ ದರ ಏರಿಕೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ರಾಜಕೀಯವಾಗಿಯೂ ಈ ವಿಷಯ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರೆ, ಕಾಂಗ್ರೆಸ್ ನಾಯಕರು ಇದು ಕೇಂದ್ರ ಸರ್ಕಾರದ ತೀರ್ಮಾನ ಎಂದು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಕನ್ನಡ ಭಾಷಿಕರಿಗೆ ಸೂಕ್ತ ಸ್ಥಾನಮಾನದ ಭರವಸೆ
ಮುಂದಿನ ನಿರ್ಧಾರಕ್ಕೆ ಕಾದು ನೋಡಬೇಕು: ಈಗ ತೇಜಸ್ವಿ ಸೂರ್ಯ ಅವರ ಮಧ್ಯಪ್ರವೇಶದಿಂದ ಪ್ರಯಾಣಿಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಈ ತೀರ್ಮಾನ ಎಷ್ಟು ದಿನ ಜಾರಿಯಲ್ಲಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ನಿರ್ಧಾರ ಕೈಗೊಳ್ಳುತ್ತವೆ ಎಂಬುದರ ಮೇಲೆ ಮೆಟ್ರೋ ದರಗಳ ಭವಿಷ್ಯ ಅವಲಂಬಿತವಾಗಿರಲಿದೆ.



















