ಮಧ್ಯರಾತ್ರಿವರೆಗೆ ಮೆಟ್ರೋ ಸಂಚಾರ, ಪ್ರಯಾಣಿಕರಿಗೆ ವಿಶೇಷ ವ್ಯವಸ್ಥೆ
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಪ್ರಯಾಣ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಡಿಸೆಂಬರ್ 31, 2025ರ ರಾತ್ರಿ ಮೆಟ್ರೋ ಸೇವೆಗಳನ್ನು ವಿಶೇಷವಾಗಿ ವಿಸ್ತರಿಸಿದೆ.
ಜನವರಿ 1, 2026ರ ಮಧ್ಯರಾತ್ರಿಯ ನಂತರವೂ ಮೆಟ್ರೋ ರೈಲುಗಳು ಸಂಚರಿಸಲಿದ್ದು, ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳಲ್ಲಿ ಕೊನೆಯ ರೈಲುಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ: ಹೊಸ ವರ್ಷಾಚರಣೆಗೆ ರಾಜ್ಯದ ರೆಸಾರ್ಟ್‌ಗಳು ಬಹುತೇಕ ಭರ್ತಿ!
ಕೊನೆಯ ಮೆಟ್ರೋ ರೈಲುಗಳ ವೇಳಾಪಟ್ಟಿ
ನೇರಳೆ ಮಾರ್ಗ (Purple Line): ವೈಟ್‌ಪೀಲ್ಡ್ → ಚಲ್ಲಘಟ್ಟ : ರಾತ್ರಿ 1.45. ಚಲ್ಲಘಟ್ಟ → ವೈಟ್‌ಪೀಲ್ಡ್ : ರಾತ್ರಿ 2.00
ಹಸಿರು ಮಾರ್ಗ (Green Line): ಮಾದಾವರ → ರೇಷ್ಮೆ ಸಂಸ್ಥೆ : ರಾತ್ರಿ 2.00. ರೇಷ್ಮೆ ಸಂಸ್ಥೆ → ಮಾದಾವರ : ರಾತ್ರಿ 2.00
ಹಳದಿ ಮಾರ್ಗ (Yellow Line): ಆರ್‌ವಿ ರಸ್ತೆ → ಬೊಮ್ಮಸಂದ್ರ : ರಾತ್ರಿ 3.10. ಬೊಮ್ಮಸಂದ್ರ → ಆರ್‌ವಿ ರಸ್ತೆ : ರಾತ್ರಿ 1.30
ಇದಲ್ಲದೆ, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್)ದಿಂದ ನೇರಳೆ ಮಾರ್ಗದ ವೈಟ್‌ಪೀಲ್ಡ್ ಹಾಗೂ ಚಲ್ಲಘಟ್ಟ ಕಡೆಗೆ, ಹಾಗೆಯೇ ಹಸಿರು ಮಾರ್ಗದ ಮಾದಾವರ ಮತ್ತು ರೇಷ್ಮೆ ಸಂಸ್ಥೆ ಕಡೆಗೆ ಹೊರಡುವ ಕೊನೆಯ ರೈಲುಗಳು ಬೆಳಗಿನ ಜಾವ 2.45ಕ್ಕೆ ಸಂಚರಿಸಲಿವೆ.
ಇದನ್ನೂ ಓದಿ: ಹೊಸ ವರ್ಷಾಚರಣೆ: ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ
ರೈಲುಗಳ ಸಂಚಾರ ಅಂತರ: ಡಿಸೆಂಬರ್ 31ರ ರಾತ್ರಿ 11.30ರಿಂದ ಸೇವೆ ಮುಗಿಯುವವರೆಗೆ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ: ಪ್ರತಿ 8 ನಿಮಿಷಕ್ಕೆ ಒಂದು ರೈಲು. ಹಳದಿ ಮಾರ್ಗದಲ್ಲಿ: ಪ್ರತಿ 15 ನಿಮಿಷಕ್ಕೆ ಒಂದು ರೈಲು
ಎಂ.ಜಿ ರಸ್ತೆ ನಿಲ್ದಾಣದಲ್ಲಿ ನಿರ್ಬಂಧ: ಹೊಸ ವರ್ಷಾಚರಣೆಗೆ ಸಂಬಂಧಿಸಿ ಎಂ.ಜಿ ರಸ್ತೆ ಪ್ರದೇಶದಲ್ಲಿ ಹೆಚ್ಚಿನ ಜನಸಂದಣಿ ನಿರೀಕ್ಷೆಯಿರುವುದರಿಂದ, ಡಿಸೆಂಬರ್ 31ರ ರಾತ್ರಿ 10 ಗಂಟೆಯಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ಆದರೆ, ಮೆಟ್ರೋ ರೈಲುಗಳು ಪಕ್ಕದ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದ್ದು, ಪ್ರಯಾಣಿಕರು ಅಲ್ಲಿ ರೈಲನ್ನು ಹತ್ತಿ-ಇಳಿಯಬಹುದು.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಟಿಕೆಟ್ ವ್ಯವಸ್ಥೆಯಲ್ಲಿ ಬದಲಾವಣೆ : ಜನದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ರಾತ್ರಿ 11 ಗಂಟೆಯ ನಂತರ ಟೋಕನ್ ಮಾರಾಟ ಇರುವುದಿಲ್ಲ. ಪ್ರಯಾಣಿಕರು QR ಟಿಕೆಟ್, ಮುಂಗಡ ರಿಟರ್ನ್ ಟಿಕೆಟ್ ಅಥವಾ ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣಿಸಬೇಕು ಎಂದು BMRCL ತಿಳಿಸಿದೆ.
ಹೊಸ ವರ್ಷಾಚರಣೆಯನ್ನು ಸುರಕ್ಷಿತವಾಗಿ ಆಚರಿಸುವ ಜೊತೆಗೆ, ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವಂತೆ ಮೆಟ್ರೋ ಅಧಿಕಾರಿಗಳು ಮನವಿ ಮಾಡಿದ್ದಾರೆ.






















