ಬೆಂಗಳೂರು ನಗರದಲ್ಲಿ 5000 ರಸ್ತೆ ಗುಂಡಿ: ಬಿಬಿಎಂಪಿಗೆ ಡಿಕೆಶಿ ಡೆಡ್‌ಲೈನ್

0
43

ಬೆಂಗಳೂರು: ಬೆಂಗಳೂರು ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಪರಿಶೀಲಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಸೋಮವಾರ ಮಧ್ಯರಾತ್ರಿ ಬಾಗಲೂರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಭೇಟಿಯ ವೇಳೆ ನಗರದಲ್ಲಿರುವ ಅಪಾಯಕರ ರಸ್ತೆ ಗುಂಡಿಗಳನ್ನು ಗುರುತಿಸಿ 3 ದಿನದಲ್ಲಿ ಅವುಗಳನ್ನು ಮುಚ್ಚುವ ಕಾರ್ಯ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ರಸ್ತೆ ಗುಂಡಿ ಗಮನ ತಂತ್ರಾಂಶ ಸಿದ್ಧಪಡಿಸಿದ್ದೇವೆ. ಈಗಾಗಲೇ 5000ಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಲಾಗಿದ್ದು, 4400 ರಸ್ತೆ ಗುಂಡಿಗಳನ್ನು ಆದ್ಯತೆ ಮೇಲೆ ಮುಚ್ಚಲು ಸೂಚನೆ ನೀಡಲಾಗಿದೆ” ಎಂದರು.

“ಈಗಾಗಲೇ 2200 ಗುಂಡಿಗಳನ್ನು ಮುಚ್ಚಲಾಗಿದೆ ಮತ್ತು ಮೂರು ದಿನಗಳಲ್ಲಿ ಉಳಿದ ಎಲ್ಲಾ ಗುಂಡಿಗಳನ್ನು ಮುಚ್ಚುವ ಗುರಿ ಹೊಂದಲಾಗಿದೆ. ಪೊಲೀಸರಿಗೂ ಅವರ ಠಾಣೆಗಳ ವ್ಯಾಪ್ತಿಯಲ್ಲಿ ಗುಂಡಿಗಳಿರುವ ಪಟ್ಟಿ ಕೊಡಲು ತಿಳಿಸಲಾಗಿದೆ. ಸಿದ್ಧಪಡಿಸಿರುವ ಆಪ್‌ನಲ್ಲಿ ನಾಗರೀಕರು ರಸ್ತೆಗುಂಡಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಬಹುದಾಗಿದೆ” ಎಂದು ತಿಳಿಸಿದರು.

“ಸಾರ್ವಜನಿಕರು ನೀಡುವ ಮಾಹಿತಿ ಆಧರಿಸಿ ತಕ್ಷಣವೇ ಗುಂಡಿ ಮುಚ್ಚುವ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಿ ಹೋಗುವುದು ಮಾತ್ರವಲ್ಲ, ಗುಣಮಟ್ಟದ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಹಾಗೂ ಇಕೋಫಿಕ್ಸ್‌ ಸೇರಿದಂತೆ ಮೂರೂ ಮಾದರಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಗುತ್ತಿದೆ. 3 ದಿನದಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚಬೇಕು ಎಂದುಕೊಂಡಿದ್ದೇವೆ. ರಾತ್ರಿ ಹೊತ್ತು ಮಾತ್ರ ಕೆಲಸ ಮಾಡಲು ಸಾಧ್ಯ. ಹೀಗಾಗಿ ಗುಣಮಟ್ಟ ಪರಿಶೀಲಿಸಲು ಬಂದಿದ್ದೇವೆ” ಎಂದರು.

ತಮ್ಮ ಸಿಟಿ ರೌಂಡ್ಸ್ ಬಗ್ಗೆ ಡಿ.ಕೆ.ಶಿವಕುಮಾರ್ ಫೇಸ್‌ ಬುಕ್ ಪೋಸ್ಟ್ ಹಾಕಿದ್ದು, “5000ಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 4400 ರಸ್ತೆ ಗುಂಡಿಗಳನ್ನು ಆದ್ಯತೆ ಮೇಲೆ ಮುಗಿಸಲು ಸೂಚನೆ ನೀಡಲಾಗಿದೆ. ಅದರಂತೆ ಕಳೆದ 4 ದಿನಗಳಿಂದ 2200 ಗುಂಡಿಗಳನ್ನು ಮುಚ್ಚಲಾಗಿದೆ” ಎಂದು ಹೇಳಿದ್ದಾರೆ.

“ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ರಸ್ತೆ ಗುಂಡಿ ಗಮನ ತಂತ್ರಾಂಶ ಸಿದ್ದಪಡಿಸಿದ್ದೇವೆ.‌ ಪೊಲೀಸರಿಗೂ ಅವರ ಠಾಣೆಗಳ ವ್ಯಾಪ್ತಿಯಲ್ಲಿ ಗುಂಡಿಗಳಿರುವ ಪಟ್ಟಿ ಕೊಡಲು ತಿಳಿಸಲಾಗಿತ್ತು. ಆ್ಯಪ್‌ನಲ್ಲಿ ನಾಗರೀಕರು ದೂರುಗಳನ್ನು ಸಲ್ಲಿಸುತ್ತಾರೆ” ಎಂದು ತಿಳಿಸಿದ್ದಾರೆ.

ಕಳೆದ ವಾರ ಮುಕ್ತಾಯಗೊಂಡ ವಿಧಾನಮಂಡಲ ಮುಂಗಾರು ಅಧಿವೇಶನದಲ್ಲಿಯೂ ಬೆಂಗಳೂರು ನಗರದ ರಸ್ತೆಗುಂಡಿ ಕುರಿತು ಚರ್ಚೆಗಳು ನಡೆದಿತ್ತು. ಪ್ರತಿಪಕ್ಷ ನಾಯಕ ಆರ್.ಅಶೋಕ ಈ ಕುರಿತು ವಿವರವಾಗಿ ಮಾತನಾಡಿದ್ದರು. ಬ್ರಾಂಡ್ ಬೆಂಗಳೂರು ಎನ್ನುವ ನೀವು ರಸ್ತೆಗುಂಡಿ ಯಾವಾಗ ಮುಚ್ಚುತ್ತೀರಿ. ವಿಧಾನಸೌಧ ಅಕ್ಕಪಕ್ಕದ ರಸ್ತೆಗಳಲ್ಲಿಯೇ ಗುಂಡಿಗಳಿವೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

Previous articleಸಂಪಾದಕೀಯ: ಸಿಎಜಿ ಗ್ಯಾರಂಟಿ ತಕರಾರಿಗೆ ನಿರ್ಲಕ್ಷ್ಯ ಧೋರಣೆ ಸರಿಯಲ್ಲ
Next articleಮೈಸೂರು: ಇಲವಾಲದ ಆರ್‌ಎಂಪಿ ಕ್ಯಾಂಪಸ್‍ನಲ್ಲಿ ಹುಲಿ ಪ್ರತ್ಯಕ್ಷ

LEAVE A REPLY

Please enter your comment!
Please enter your name here