Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು ಕರಗ 2026: ದ್ರೌಪದಿ ದೇವಿ ಹಸಿ ಕರಗ ಶಕ್ತ್ಯೋತ್ಸವ

ಬೆಂಗಳೂರು ಕರಗ 2026: ದ್ರೌಪದಿ ದೇವಿ ಹಸಿ ಕರಗ ಶಕ್ತ್ಯೋತ್ಸವ

0
81

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಈ ವರ್ಷವೂ ಭಕ್ತಿಭಾವ ಮತ್ತು ಸಡಗರದ ನಡುವೆ ಭವ್ಯವಾಗಿ ಆರಂಭಗೊಂಡಿದೆ. ಇಂದು ನಡೆದ ಶಕ್ತ್ಯೋತ್ಸವದ ಅಂಗವಾಗಿ ‘ಹಸಿ ಕರಗ’ ಸಂಪ್ರದಾಯವು ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿದ್ದು, ದ್ರೌಪದಿ ದೇವಿಯ ದರ್ಶನಕ್ಕಾಗಿ ಭಕ್ತರು ಮುಗಿಬಿದ್ದ ದೃಶ್ಯ ಕಂಡುಬಂದಿದೆ.

ಚೈತ್ರ ಹುಣ್ಣಿಮೆಗೆ ಮೂರು ದಿನಗಳ ಮುನ್ನ ದ್ರೌಪದಿ ದೇವಿ ಭೂಮಿಗೆ ಅವತರಿಸುತ್ತಾಳೆ ಎಂಬ ನಂಬಿಕೆ ಈ ಮಹೋತ್ಸವದ ಪ್ರಮುಖ ಅಂಶವಾಗಿದೆ. ಈ ಹಿನ್ನೆಲೆ ಇಂದು ಮುಂಜಾನೆ 3 ಗಂಟೆಯಿಂದಲೇ ಹಸಿಕರಗ ಕಾರ್ಯಕ್ರಮಗಳು ಆರಂಭಗೊಂಡವು. ಸಂಪಂಗಿ ಕೆರೆಯ ಶಕ್ತಿ ಪೀಠದಲ್ಲಿ ಆರಂಭವಾದ ಕರಗ, ಗಂಗೆ ಪೂಜೆ ಬಳಿಕ ನಗರದ ಪೇಟೆ ಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ಧರ್ಮರಾಯಸ್ವಾಮಿ ದೇವಾಲಯ ತಲುಪಿತು.

ಐತಿಹಾಸಿಕ ಹಿನ್ನೆಲೆ : ಕರಗ ಮಹೋತ್ಸವಕ್ಕೆ ಮಹಾಭಾರತ ಕಾಲದ ಪೌರಾಣಿಕ ಹಿನ್ನೆಲೆ ಇದೆ. ಪಾಂಡವರ ಸ್ವರ್ಗಾರೋಹಣದ ಸಂದರ್ಭದಲ್ಲಿ ದ್ರೌಪದಿ ದೇವಿಯನ್ನು ರಕ್ಷಿಸಲು ವೀರಕುಮಾರರನ್ನು ಸೃಷ್ಟಿಸಿದ ಕಥೆ ಇಂದಿಗೂ ಆಚರಣೆಯ ರೂಪದಲ್ಲಿ ಜೀವಂತವಾಗಿದೆ. ‘ಅಲಗು ಸೇವೆ’ ಎಂಬ ಆಚರಣೆ ಇದೇ ಪೌರಾಣಿಕ ಘಟನೆಯ ನೆನಪಾಗಿ ನಡೆಸಲಾಗುತ್ತದೆ.

ಭಕ್ತರ ಮಹಾಪ್ರವಾಹ : ಈ ಬಾರಿ ಸಹ ಲಕ್ಷಾಂತರ ಭಕ್ತರು ಕರಗದ ದರ್ಶನಕ್ಕಾಗಿ ನಗರಕ್ಕೆ ಆಗಮಿಸಿದ್ದು, ಪೇಟೆ ಪ್ರದೇಶಗಳು ಜನಸಾಗರದಿಂದ ತುಂಬಿಕೊಂಡಿವೆ. ಹಸಿ ಕರಗದ ವೇಳೆ ಭಕ್ತರು ಪೂಜೆ ಸಲ್ಲಿಸಿ ಭಕ್ತಿಭಾವ ವ್ಯಕ್ತಪಡಿಸಿದರು.

ಮುಂದಿನ ಕಾರ್ಯಕ್ರಮಗಳು : ಇಂದು ಮಧ್ಯಾಹ್ನ ಪೊಂಗಲ್ ಸೇವೆ ನಡೆಯಲಿದ್ದು, ನಾಳೆ (ಏಪ್ರಿಲ್ 1) ಕರ್ಪೂರ ಪೂಜೆ ನೆರವೇರಲಿದೆ. ಇದೇ ದಿನ ರಾತ್ರಿ ವಿಶ್ವವಿಖ್ಯಾತ ಕರಗ ಶಕ್ತ್ಯೋತ್ಸವ ಜರುಗಲಿದೆ. ಈ ಸಂದರ್ಭದಲ್ಲಿ ನಗರಾದ್ಯಂತ ವಿಶೇಷ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಈ ವರ್ಷ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಭದ್ರತೆ ಮತ್ತು ಟ್ರಾಫಿಕ್ ನಿಯಂತ್ರಣಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದ್ದು, ಭಕ್ತರಿಗೆ ಅನುಕೂಲವಾಗುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.